ಚಿಕ್ಕಮಗಳೂರು : ಜಿಲ್ಲೆಯ ತರೀಕೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆ ಮುಂದೆ ಬಿ ನೆಗೆಟಿವ್ ರಕ್ತ ಸಿಗದೆ ಪರದಾಟ ನಡೆಸುತ್ತಿದ್ದ ಗರ್ಭಿಣಿಗೆ ವೈದ್ಯರು ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಿದ್ದಾರೆ. ಮೂಲತಃ ಅಜ್ಜಂಪುರ ತಾಲೂಕಿನ ಗಡಿ ರಂಗಾಪುರ ಗ್ರಾಮದ ಯಶೋದಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಿ ನೆಗೆಟಿವ್ ರಕ್ತದ ಗುಂಪು ಹೊಂದಿದ್ದ ಯಶೋದಾ ಅವರಿಗೆ 9 ತಿಂಗಳು ತುಂಬಿತ್ತು. ಈ ವೇಳೆ ರಕ್ತ ಸಿಗದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೆರಿಗೆ ಸಲುವಾಗಿ ಹೊರಡಲು ಸಿದ್ಧರಾಗಿದ್ದರು.
ಈ ಘಟನೆ ಬಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಯಶೋದಾ ಅವರು ಮಾತನಾಡಿ, " ಗರ್ಭಾವಧಿ ಸಮಯದಲ್ಲಿ ಮೊದಲು ಮೂರು ತಿಂಗಳು ಖಾಸಗಿ ಆಸ್ಪತ್ರೆಗೆ ತೋರಿಸಿದ್ದೆವು. ಬಳಿಕ ಹೆರಿಗೆ ಮಾಡಿಸಲು 30 ಸಾವಿರ ರೂ. ಗಳನ್ನು ಕೇಳಿದರು. ನಾವು ಬಡವರಾದ ಕಾರಣ ಹಣ ಹೊಂದಿಸಲು ಸಾಧ್ಯವಾಗಲಿಲ್ಲ". ಹೀಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೊರಡುವ ಸಂದರ್ಭದಲ್ಲಿ "ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಆರ್. ದೇವರಾಜ್ ಅವರು ಎದುರಾಗಿ ವಿಚಾರಿಸಿದಾಗ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡೆವು. ತಕ್ಷಣ ನಮ್ಮ ಮಾತಿಗೆ ಸ್ಪಂದಿಸಿ ನನಗೆ ಹೆರಿಗೆ ಮಾಡಿಸಿದ್ದಾರೆ. ಅವರಿಂದ ನಮಗೆ ತುಂಬ ಸಹಾಯವಾಗಿದೆ. ಇಲ್ಲಿನ ಆಸ್ಪತ್ರೆ ಚಿಕಿತ್ಸೆಗೆ ಅನುಕೂಲಕರವಾಗಿದೆ" ಎಂದು ಹೇಳಿದರು.
ವೈದ್ಯರು ಹೇಳಿದ್ದೇನು? : ತರೀಕೆರೆ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಮೂಳೆ ತಜ್ಞ ಆರ್. ದೇವರಾಜ್ ಮಾತನಾಡಿ "ಜೂನ್ 25 ರ ಭಾನುವಾರ ಮಧ್ಯಾಹ್ನ ವೇಳೆ ಆಸ್ಪತ್ರೆ ರೌಂಡ್ಸ್ ಮುಗಿಸಿ ಮನೆಗೆ ಹೊರಟಿದ್ದಾಗ ಆಸ್ಪತ್ರೆ ಮುಂದೆ ಗರ್ಭಿಣಿ ಮತ್ತು ಅವರ ಕುಟುಂಬಸ್ಥರು ಕೈಯಲ್ಲಿ 2 ಬ್ಯಾಗ್ ಹಿಡಿದು ಪರದಾಡುತ್ತಿದ್ದರು. ಇದನ್ನು ಗಮನಿಸಿ ವಿಚಾರಿಸಿದಾಗ ಸರ್ ನಾವು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಹೋಗಬೇಕು. ತಿಂಗಳು ತುಂಬಿದೆ. ನಮಗೆ ಎಲ್ಲಿಯೂ ಸರಿಯಾಗಿ ಹೆರಿಗೆಗೆ ಅನುಕೂಲವಾಗುತ್ತಿಲ್ಲ ಎಂದು ಕೇಳಿಕೊಂಡರು". ಈ ಅಸ್ಪತ್ರೆಯಲ್ಲಿ ನಿಮಗೆ ಏನು ತೊಂದರೆ ಆಗುತ್ತಿದೆ ಎಂದು ಅವರನ್ನು ನಾನು ಕೇಳಿದೆ.
"ನಮಗೆ ಎಲ್ಲಿ ಹೋದರು ಬಿ ನೆಗೆಟಿವ್ ರಕ್ತ ಸಿಗುತಿಲ್ಲ. ಹಾಗಾಗಿ ಇಲ್ಲಿ ನಾವು ರಕ್ತ ಕೊಡುವುದಕ್ಕಿಂತ ಅಥವಾ ಆಚೆ ಕಡೆಯಿಂದ ತರುವುದಕ್ಕಿಂತ ಶಿವಮೊಗ್ಗಕ್ಕೆ ಹೋಗಿ ಹೆರಿಗೆ ಮಾಡಿಸಿಕೊಳ್ಳುತ್ತೇವೆ ಎಂದಾಗ ರಕ್ತದ ವ್ಯವಸ್ಥೆ ಮಾಡಿಕೊಟ್ಟರೆ ನೀವು ಇಲ್ಲೇ ಹೆರಿಗೆ ಮಾಡಿಕೊಳ್ಳುತ್ತಿರಾ ಎಂದು ಪ್ರಶ್ನೆ ಕೇಳಿದೆ. ಇದೇ ವೇಳೆ ಅವರು ಸಂತೋಷದಿಂದ ಅಪರೇಷನ್ ಮಾಡಿಸಿಕೊಳ್ಳಲು ಒಪ್ಪಿಗೆ ಸೂಚಿಸಿದರು. ತಕ್ಷಣ ನಮ್ಮ ಪ್ರಸೂತಿ ತಜ್ಞರಿಗೂ ಕರೆ ಮಾಡಿ ಬಿ ನೆಗೆಟಿವ್ ರಕ್ತ ತಂದು ಕೊಟ್ಟರೇ ಹೆರಿಗೆ ಮಾಡಿಸುತ್ತೀರಾ ಎಂದು ಕೇಳಿದೆ".
"ಅವರು ಕೂಡ ರಕ್ತ ಸಿಕ್ಕರೇ ಸಂಜೆ ಒಳಗೆ ಹೆರಿಗೆ ಮಾಡುವುದಾಗಿ ಭರವಸೆ ನೀಡಿದ ನಂತರ ರಕ್ತ ನಿಧಿ ಶೇಖರಣಾ ಘಟಕಕ್ಕೆ ವಿಷಯ ತಿಳಿಸಿದ 10 ನಿಮಿಷದಲ್ಲೇ ರಕ್ತವನ್ನು ಒದಗಿಸಿದರು. ಬಳಿಕ ಯಾವುದೇ ಸಮಸ್ಯೆ ಇಲ್ಲದೆ ಅಪರೇಷನ್ ಮಾಡುವ ಮೂಲಕ ಹೆರಿಗೆ ಮಾಡಿಸಿ ಹೆಣ್ಣು ಮಗುವಿಗೆ ಜನನ ಆಯಿತು. ಇದೀಗ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಈ ಗರ್ಭಿಣಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಮಾಡಿದ ತೃಪ್ತಿ ನನಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ : ನಾರ್ಮಲ್ ಹೆರಿಗೆಗಳನ್ನೇ ಮಾಡಿಸಿ, ಅನಿವಾರ್ಯತೆ ಇದ್ದರೆ ಮಾತ್ರ ಸಿಜೇರಿಯನ್ ಮಾಡಿ: ವೈದ್ಯರಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಲಹೆ