ಚಿಕ್ಕಮಗಳೂರು : ಅದು ಸರ್ಕಾರಿ ಆಂಬ್ಯುಲೆನ್ಸ್. ಅದರದ್ದೂ ಕೂಡ ಜೀವ ಉಳಿಸೋ ವೈದ್ಯರದ್ದಷ್ಟೆ ಪ್ರಮುಖ ಪಾತ್ರ. ಆದ್ರೆ, ಅದರ ಕೈ-ಕಾಲು-ಜೀವಾಳದಲ್ಲಿ ಜೀವವೇ ಇಲ್ಲ. ಜೀವ ಉಳಿಸೋಕೆಂದು ತುಂಬು ಗರ್ಭೀಣಿಯನ್ನ ಹೊತ್ತೊಯ್ತಿದ್ದ ಆಂಬುಲೆನ್ಸ್ ನಡು ರಸ್ತೆಯಲ್ಲಿ ಕೆಟ್ಟು ನಿಂತು ಗರ್ಭೀಣಿ ಒಂದು ಗಂಟೆಗಳ ಕಾಲ ಜೀವನ್ಮರಣದ ನಡುವೆ ಹೋರಾಡಿದ್ದಾಳೆ. ಆಂಬ್ಯುಲೆನ್ಸ್ ಮೂರು ಬಾರಿ ಕೆಟ್ಟು ನಿಂತ ಪರಿಣಾಮ ಬೇರೊಂದು ಆಂಬ್ಯುಲೆನ್ಸ್ ತಂದು ಗರ್ಭಿಣಿಯನ್ನ ಆಸ್ಪತ್ರೆಗೆ ಸಾಗಿಸಲಾಗಿದೆ. ಅದೃಷ್ಟವಶಾತ್ ತಾಯಿ - ಮಗು ಸೇಫಾಗಿದ್ದಾರೆ.
ಎರಡ್ಮೂರು ಬಾರಿ ಕೆಟ್ಟು ನಿಂತ ಆಂಬ್ಯುಲೆನ್ಸ್: ಕಳಸ ತಾಲೂಕಿನ ಹಳುವಳ್ಳಿ ಗ್ರಾಮದ ಶರಣ್ಯ ಎಂಬ ತುಂಬು ಗರ್ಭಿಣಿಯನ್ನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಆಂಬ್ಯುಲೆನ್ಸ್ ಕೆಟ್ಟು ನಿಂತಿದೆ. ದುರಸ್ತಿ ಮಾಡಿಕೊಂಡು ಹೊರಟರೆ ಸ್ವಲ್ಪ ದೂರದಲ್ಲಿ ತಾಂತ್ರಿಕ ದೋಷದಿಂದ ಮತ್ತೆ ನಿಂತಿತ್ತು. ಈ ಮಧ್ಯೆ ರಸ್ತೆಯಲ್ಲಿನ ಗುಂಡಿಗೆ ಇಳಿದ ಆಂಬ್ಯುಲೆನ್ಸ್, ಪಂಚರ್ ಕೂಡ ಆಗಿದೆ. ಹೀಗೆ ಎರಡ್ಮೂರು ಬಾರಿ ಕೆಟ್ಟು ನಿಂತ ಆಂಬ್ಯುಲೆನ್ಸ್ ದುರಸ್ತಿಯಾಗುವಷ್ಟರಲ್ಲಿ ಸುಮಾರು 2 ಗಂಟೆಗಳೇ ಕಳೆದಿದೆ.
ಸರ್ಕಾರದ ವಿರುದ್ಧ ಜನಾಕ್ರೋಶ: ಇದರಿಂದ ತೀವ್ರ ಅಸ್ವಸ್ಥರಾದ ಶರಣ್ಯಳನ್ನ ಕಂಡು ಸ್ಥಳೀಯರು ಬಾಳೆಹೊನ್ನೂರಿಗೆ ಫೋನ್ ಮಾಡಿ ಬೇರೊಂದು ಆಂಬ್ಯುಲೆನ್ಸ್ ಕರೆಸಿ ಮಹಿಳೆಯನ್ನ ಕೊಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊಪ್ಪ ಆಸ್ಪತ್ರೆಗೆ ದಾಖಲಾದ ಶರಣ್ಯ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ಜೀವ ಉಳಿಸುವ ಆಂಬ್ಯುಲೆನ್ಸ್ ಗಳೇ ಹೀಗೆ ರಸ್ತೆ ಮಧ್ಯೆ ಕೆಟ್ಟು ನಿಲ್ಲುತ್ತಿರುವುದರಿಂದ ಜನ ಸಾಮಾನ್ಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ತಾಯಿ ಮಗು ಪ್ರಾಣಾಪಾಯದಿಂದ ಪಾರು: ಆಂಬ್ಯುಲೆನ್ಸ್ಗಳು ರಸ್ತೆ ಮಧ್ಯೆ ಸ್ಟೇರಿಂಗ್ ರಾಡ್ ಕಟ್ಟಾಗಿ ನಿಲ್ಲುತ್ತವೆ ಎಂದರೆ ಆಂಬ್ಯುಲೆನ್ಸ್ ಗಳು ಯಾವ ಪ್ರಮಾಣದಲ್ಲಿ ಇರಬಹುದು ಎಂದು ಜನ ಸಾಮಾನ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಬೇರೊಂದು ವಾಹನ ಗರ್ಭಿಣಿಯನ್ನ ಆಸ್ಪತ್ರೆಗೆ ಸೇರಿಸಿದೆ. ಅದೃಷ್ಟವಶಾತ್ ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಒಂದು ವೇಳೆ ಸಮಯಕ್ಕೆ ಸರಿಯಾಗಿ ಬೇರೊಂದು ಆಂಬ್ಯುಲೆನ್ಸ್ ಸಿಗದಿದ್ದರೆ ಏನಾದರೂ ಅನಾಹುತ ಸಂಭವಿಸಿದ್ದರೆ ಜವಾಬ್ದಾರಿ ಯಾರೆಂದು ಸ್ಥಳೀಯರು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಕಳಸ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಈ ಆಂಬ್ಯುಲೆನ್ಸ್ ಹೀಗೆ ರಸ್ತೆ ಮಧ್ಯೆ ಕೆಟ್ಟು ನಿಂತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅಪಘಾತಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಕೆಟ್ಟು ನಿಂತಿತ್ತು. ಆಗಲೂ ಕೂಡ ಬೇರೊಂದು ಆಂಬ್ಯುಲೆನ್ಸ್ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಸಾಲದ್ದಕ್ಕೆ ಈ ಆಂಬ್ಯುಲೆನ್ಸ್ ಹೊಸದು ಎಂದು ಹೇಳಲಾಗುತ್ತಿದೆ.
ಒಟ್ಟಾರೆ, ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ ಸ್ಥಿತಿ ಕಂಡು ಜನ ನಗುತ್ತಿದ್ದಾರೆ. ರಾಜಕಾರಣಿಗಳು - ಅಧಿಕಾರಿಗಳಿಗೆ ಆಗಾಗ್ಗೆ ಹೊಸ - ಹೊಸ ಐಷಾರಾಮಿ ಕಾರುಗಳನ್ನ ಖರೀದಿಸುತ್ತಾರೆ. ಆದರೆ, ಬಡ ಜನರಿಗಾದರೆ ರಸ್ತೆ ಮಧ್ಯೆ ಮೂರ್ನಾಲ್ಕು ಬಾರಿ ಕೆಟ್ಟು ನಿಲ್ಲುವ ಆಂಬ್ಯುಲೆನ್ಸ್ ಗಳನ್ನ ನೀಡುತ್ತಾರೆ. ಇದು ಯಾವ ಸೀಮೆ ನ್ಯಾಯ. ಇದನ್ನೆಲ್ಲಾ ಕಂಡ ಜನ, ಜನರಿಗಾಗಿ ಸರ್ಕಾರವೋ ಅಥವಾ ಸರ್ಕಾರ - ಅಧಿಕಾರಕ್ಕಾಗಿ ಜನರೋ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ : ಬೈಕ್ ಸ್ಕಿಡ್ ಆಗಿ ರಸ್ತೆ ಮೇಲೆ ಬಿದ್ದ ಮಹಿಳೆ: ಟಿಪ್ಪರ್ ಹರಿದು ಸ್ಥಳದಲ್ಲೇ ಸಾವು