ಚಿಕ್ಕಮಗಳೂರು: ಆಲೂಗೆಡ್ಡೆ ಬೆಳೆ ಬೆಳೆದರೆ ಕೈ ಸುಟ್ಟುಕೊಳ್ಳುವುದು ಬಹುತೇಕ ಖಚಿತ ಎನ್ನುವ ಮಾತು ಜಿಲ್ಲೆಯ ಹಲವು ರೈತರದ್ದು. ಚಿಕ್ಕಮಗಳೂರಿನಲ್ಲಿ ರೈತರು ಆಲೂಗೆಡ್ಡೆ ಬೆಳೆ ಬೆಳೆದು ಸಾಕಷ್ಟು ಲಾಭದ ನಿರೀಕ್ಷೆ ಹೊಂದಿದ್ದರು. ಆದ್ರೆ ಕಳಪೆ ಗುಣಮಟ್ಟದ ಬಿತ್ತನೆ ಬೀಜದ ಪರಿಣಾಮ ಆಲೂಗೆಡ್ಡೆ ಬೀಜ ನೆಲದಲ್ಲೇ ಕರಗಿದೆ. ಇದರಿಂದ ಮನನೊಂದ ರೈತರೊಬ್ಬರು ಬೆಳೆ ಮೇಲೆ ಟ್ರ್ಯಾಕ್ಟರ್ ಚಾಲನೆ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಕಳಪೆ ಬಿತ್ತನೆ ಬೀಜ ವಿತರಿಸಿದವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ರೈತರು ಹಲವು ತರಕಾರಿ ಬೆಳೆ ಬೆಳೆಯತ್ತಾರೆ. ಇದರ ಜೊತೆಗೆ ಆಲೂಗೆಡ್ಡೆ ಬೆಳೆಯನ್ನು ಕೂಡ ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಈ ಬಾರಿ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗೆಡ್ಡೆ ಬೆಳೆಯಲಾಗಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಸಲ ಆಲೂಗಡ್ಡೆ ಬೆಳೆ ಆರಂಭದಲ್ಲಿ ಬಿದ್ದ ಮಳೆಗೆ ಕೆಲವೆಡೆ ಹುಲುಸಾಗಿ ಬೆಳೆದಿತ್ತು.
ಜಿಲ್ಲೆಯ ತರೀಕೆರೆ, ಲಿಂಗದಹಳ್ಳಿ, ಅಂಬಳೆ, ಕಸಬಾ, ಖಾಂಡ್ಯ, ಕೋಡಿಹಳ್ಳಿ, ಬಿಗ್ಗದೇವನ ಹಳ್ಳಿ, ಬೀಕನಹಳ್ಳಿ, ಹಂಪಾಪುರ, ಬಿಳೇಕಲ್ಲು ಮುಂತಾದ ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಲೂಗೆಡ್ಡೆ ಬೆಳೆಯಲಾಗುತ್ತಿದೆ. ಈ ಭಾಗದ ರೈತರು ಹಾಸನದಿಂದ ಉತ್ತಮ ತಳಿಯ ಆಲೂಗೆಡ್ಡೆಯ ಬೀಜವನ್ನು ಹೆಚ್ಚು ಹಣ ನೀಡಿ ಖರೀದಿಸಿದ್ದರು. ದುಬಾರಿ ಮೌಲ್ಯದ ಬೀಜ ಮತ್ತು ಗೊಬ್ಬರ ತಂದು ಬಿತ್ತನೆ ಮಾಡಿದ್ದಾರೆ. ಹೀಗೆ ಬಿತ್ತನೆ ಮಾಡಿರುವ ಆಲೂಗೆಡ್ಡೆ ಬೆಳೆ ಕೈ ಕೊಟ್ಟಿರುವ ಪರಿಣಾಮ ರೈತರು ಹಾಸನ ಖಾಸಗಿ ಮಂಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಾವಿರಾರು ರೂಪಾಯಿ ಖರ್ಚು ಮಾಡಿ ಆಲೂಗೆಡ್ಡೆ ಬೆಳೆ ಬೆಳೆದಿದ್ದ ಚಂದ್ರು ಎನ್ನುವ ರೈತ ಮನನೊಂದು ಟ್ರ್ಯಾಕ್ಟರ್ ಚಾಲನೆ ಮಾಡಿ ಬೆಳೆ ನಾಶ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಸಿರ್ಗಾಪುರ ಗ್ರಾಮದಲ್ಲಿ ನಡೆದಿದೆ. ಹಾಸನದ ಖಾಸಗಿ ಆಲೂಗಡ್ಡೆ ಮಂಡಿಯಲ್ಲಿ 5 ದಿನಕ್ಕೆ ಬೆಳೆ ಬೆಳೆಯುತ್ತದೆ ಎಂದು ಹೇಳಿ ಕೊಟ್ಟ ಬೀಜವನ್ನು 60 ರಿಂದ 70 ಜನ ರೈತರು ಮೂರು ಲಾರಿಯಲ್ಲಿ ತಂದಿದ್ದರು. ರೈತರಾದ ಚಂದ್ರು ತಮ್ಮ 10 ಎಕರೆ ಜಮೀನಿನಲ್ಲಿ ಬೀಜ ಬಿತ್ತನೆ ಮಾಡಿದ್ದರು. ಆದರೆ 15 ದಿನವಾದರೂ ಬೆಳೆ ಬೆಳೆದಿಲ್ಲ. ಆಲೂಗೆಡ್ಡೆ ಬೀಜ ನೆಲದಲ್ಲಿ ಕರಗಿರೋದ್ರಿಂದ ರೈತ ಮನನೊಂದು ಟ್ರ್ಯಾಕ್ಟರ್ ಚಲಾಯಿಸಿದ್ದಾರೆ.
ಇದನ್ನೂ ಓದಿ: ಮುಂಗಾರು ಪೂರ್ವ ಮಳೆ: ಹಾವೇರಿಯಲ್ಲಿ ಸಿಡಿಲಬ್ಬರ, ಇಬ್ಬರಿಗೆ ಗಾಯ, 25 ಕುರಿಗಳು ಸಾವು
ಈ ಬಗ್ಗೆ ರೈತರು ಮಾತನಾಡಿ, "ಸಾಲ ಮಾಡಿ ಬಿತ್ತನೆ ಬೀಜ ಖರೀದಿಸಿದ್ದೇವೆ. ಸದ್ಯ ವಿಷ ಕುಡಿಯುವ ಪರಿಸ್ಥಿತಿ ಬಂದಿದೆ. ನ್ಯಾಯ ಒದಗಿಸುವವರು ಯಾರೂ ಇಲ್ಲವೇ? ಕಳಪೆ ಬೀಜ ಕೊಟ್ಟು ಮೋಸ ಮಾಡಿದ್ರಿ" ಎಂದು ನೊಂದು ನುಡಿದರು.
ಇದನ್ನೂ ಓದಿ: ನಗುವಲ್ಲೇ 'ಸನ್ನಿಧಿ' ಜಾದೂ; ಸಾಧಾರಣ ಸೀರೆಯಲ್ಲೂ ಅದ್ಭುತ ಸೌಂದರ್ಯ- ನಟಿ ವೈಷ್ಣವಿಯ ಫೋಟೋಸ್ ನೋಡಿ
ಮಲೆನಾಡಿನಲ್ಲಿ ಆಲೂಗೆಡ್ಡೆ ಬೆಳೆ ಬೆಳೆದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕೂಡಲೇ ಅಧಿಕಾರಿಗಳು ಮಧ್ಯಪ್ರವೇಶ ಮಾಡಿ ಕನಿಷ್ಠ ಪರಿಹಾರವನ್ನಾದರೂ ನೀಡಬೇಕೆಂಬ ಆಗ್ರಹ ಜಿಲ್ಲೆಯ ಆಲೂಗೆಡ್ಡೆ ಬೆಳೆ ಬೆಳೆದ ರೈತರದ್ದು.