ಚಿಕ್ಕಮಗಳೂರು: ವೋಟ್ ಕೇಳೋಕೆ ನಮ್ಮ ಮನೆ ಬಾಗಿಲಿಗೆ ಬರ್ತಾ ಇದ್ರಿ. ಆದರೆ, ಈ ಕೊರೊನಾ ವೈರಸ್ ಬಂದ ಸಂದರ್ಭದಲ್ಲಿ, ರೇಷನ್ ಬ್ಯಾಗಿಗೆ ನಿಮ್ಮ ಫೋಟೋ ಪ್ರಿಂಟ್ ಮಾಡಿಸಿ ಬೆಂಗಳೂರಲ್ಲಿ ಹಂಚುತ್ತಿದ್ದಿರಲ್ವಾ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಜಿಲ್ಲೆಯ ಜನರು ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ನೀವು ಸಂಸದರಾಗಿ ಆಯ್ಕೆಯಾಗಿರುವುದು ಉಡುಪಿ - ಚಿಕ್ಕಮಗಳೂರು ಕ್ಷೇತ್ರದಿಂದ. ಆದರೆ ಕೆಲಸ ಮಾಡುತ್ತಿರೋದು ಅಲ್ಲೆಲ್ಲೋ ಬೆಂಗಳೂರಿಗೆ ಎಂದು ಗರಂ ಆಗಿದ್ದಾರೆ. ತಾನು ಹೆತ್ತ ಮಕ್ಕಳು ಮನೆಯಲ್ಲಿ ಹಸಿವಿನಿಂದ ಬಳಲುತ್ತಿದ್ದಾರೆ. ಆದರೂ ತಾಯಿ ಪಕ್ಕದ ಮನೆಯ ಮಕ್ಕಳಿಗೆ ಅನ್ನ ನೀಡೋಕೆ ಹೋಗಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

ಮೋದಿ ಎಂಬ ಶಕ್ತಿಗೆ ಜೀವ ತುಂಬಲು ನಿಮಗೆ ಮತ ಹಾಕಿದ್ದೇವೆ ಹೊರತು, ನಿಮ್ಮ ಕೆಲಸ ಕಾರ್ಯ ನೋಡಿ ಅಲ್ಲವೇ ಅಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಕೊರೊನಾ ವೈರಸ್ನಿಂದ ಕೆಲಸ ಕಾರ್ಯವಿಲ್ಲದೇ ಕ್ಷೇತ್ರದ ಜನತೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ ನಮ್ಮ ಸಂಸದರು ಬೆಂಗಳೂರಲ್ಲಿ ಕಿಟ್ ಹಂಚುತ್ತಿದ್ದಾರೆ. ಮುಂದಿನ ಚುನಾವಣೆಗೆ ರೆಡಿಯಾಗುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.