ಚಿಕ್ಕಮಗಳೂರು: ಕಳಪೆ ರಸ್ತೆ ಕಾಮಗಾರಿ ಮಾಡಿರುವುದನ್ನು ಕಂಡ ಸಾರ್ವಜನಿಕರು ರಸ್ತೆಯ ಟಾರ್ನ್ನೇ ಕಿತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಬೆಳಗ್ಗೆ ರಸ್ತೆಗೆ ಹಾಕಿದ್ದ ಡಾಂಬರು ಸಂಜೆ ವೇಳೆಗೆ ಕಿತ್ತು ಬರುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕೈಯಲ್ಲೇ ಟಾರ್ ಕಿತ್ತು ಕಳಪೆ ಕಾಮಗಾರಿ ವಿರುದ್ಧ ಕುಪಿತಗೊಂಡಿದ್ದಾರೆ.
ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಗಡಿಗೇಶ್ವರ ಹಾಗೂ ಕಟ್ಟಿನಮನೆ ಗ್ರಾಮಕ್ಕೆ ಮೂರು ತಿಂಗಳ ಹಿಂದೆ ರಸ್ತೆ ಮಂಜೂರು ಆಗಿತ್ತು. ರಸ್ತೆ ನಿರ್ಮಾಣದ ವೇಳೆ ಜಲ್ಲಿ ಕಲ್ಲು ಹಾಕದೆ, ಜಲ್ಲಿ ಪುಡಿ ಜೊತೆ ಡಾಂಬರ್ ಮಿಕ್ಸ್ ಮಾಡಿ ನೆಲದ ಮೇಲೆ ಹಾಕಿ ಬುಲ್ಡೋಜರ್ ಓಡಿಸಿರೋ ಪರಿಣಾಮ, ಬೆಳಗ್ಗೆ ಹಾಕಿದ ಟಾರ್ ಸಂಜೆ ಹೊತ್ತಿಗೆ ಕಿತ್ತು ಬರುತ್ತಿದೆ.
ದಿನಕ್ಕೆ ಒಂದೇ ಕಿ.ಮೀ. ರಸ್ತೆ ಮಾಡುತ್ತೇವೆ ಎಂದು ಹೇಳಿದ್ದ ಗುತ್ತಿಗೆದಾರ ಒಂದೇ ದಿನಕ್ಕೆ ಐದು ಕಿ.ಮೀ. ರಸ್ತೆ ನಿರ್ಮಿಸಿದ್ದಾರೆ. ಸಾಲದಕ್ಕೆ ರಸ್ತೆ ನಿರ್ಮಿಸುವ ಜಾಗದಲ್ಲಿ ಕಾಂಟ್ರಾಕ್ಟರ್ ಕೂಡ ಇರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಈ ಕಾಮಗಾರಿ ವಿರುದ್ಧ ಆಕ್ರೋಶಗೊಂಡಿರುವ ಸ್ಥಳೀಯರು ಮತ್ತೆ ಸರಿಯಾದ ಕಾಮಗಾರಿ ಮಾಡಬೇಕೆಂದು ಆಗ್ರಹಿಸಿದ್ದಾರೆ.