ಚಿಕ್ಕಮಗಳೂರು : ಪೊಲೀಸರ ಮೇಲೆ ವಾಹನ ಹತ್ತಿಸಲು ಯತ್ನಿಸಿದ ದನಗಳ್ಳರ ಮೇಲೆ ಇನ್ಸ್ಪೆಕ್ಟರ್ವೊಬ್ಬರು ಗುಂಡು ಹಾರಿಸಿರುವ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಪಿಳ್ಳೆ ಬೀರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಲೆನಾಡು ಭಾಗದಲ್ಲಿದ್ದ ದನಗಳ್ಳರ ಹಾವಳಿ ಈಗ ಬಯಲುಸೀಮೆ ಭಾಗಕ್ಕೂ ಕಾಲಿಟ್ಟಿದೆ. ತರೀಕೆರೆ ತಾಲೂಕಿನ ಲಿಂಗದಹಳ್ಳಿಯ ಸಂತವೇರಿ ಸುತ್ತಮುತ್ತ ಹಲವು ದಿನಗಳಿಂದ ದನ ಕಳ್ಳತನ ಪ್ರಕರಣ ಯಥೇಚ್ಛವಾಗಿ ನಡೆಯುತ್ತಿವೆ ಎಂದು ಪೊಲೀಸರ ಬಳಿ ಹಲವಾರು ದೂರು ದಾಖಲಾಗಿದ್ದವು. ಈ ಬಗ್ಗೆ ಲಿಂಗದಹಳ್ಳಿ ಪೊಲೀಸರು ಕೂಡ ಕಾರ್ಯ ಪ್ರವೃತ್ತರಾಗಿದ್ದರು.
ನಿನ್ನೆ ರಾತ್ರಿ ಖಚಿತ ಮಾಹಿತಿ ಮೇರೆಗೆ ದನಗಳ್ಳರನ್ನು ಬಂಧಿಸಲು ಲಿಂಗದಹಳ್ಳಿ ಪಿಎಸ್ಐ ರಫೀಕ್ ನೇತೃತ್ವದ ತಂಡ ಮುಂದಾಗಿತ್ತು. ಈ ವೇಳೆ ಪೊಲೀಸರ ಮೇಲೆ ದನಗಳ್ಳರು ತಮ್ಮ ವಾಹನ ಹತ್ತಿಸಲು ಯತ್ನಿಸಿದ್ದಾರೆ. ಈ ಸಂದರ್ಭ ಪೊಲೀಸರು ತಪ್ಪಿಸಿಕೊಂಡಿದ್ದು, ಘಟನೆಯಲ್ಲಿ ಇಬ್ಬರು ಕಾನ್ಸ್ಟೇಬಲ್ಗಳಿಗೆ ಗಾಯವಾಗಿದೆ.
ಪೊಲೀಸರ ಮೇಲೆ ಗಾಡಿ ಹತ್ತಿಸಲು ಯತ್ನಿಸಿದ ದನಗಳ್ಳರ ಮೇಲೆ ಪಿಎಸ್ಐ ರಫೀಕ್ ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ದನಗಳ್ಳರು ತಮ್ಮ ವಾಹನ ಮೂಲಕ ಪರಾರಿಯಾಗಲು ಯತ್ನಿಸುತ್ತಿದ್ದಾರೆ. ಆದ್ರೂ ಸಹ ಪಿಎಸ್ಐ ವಾಹನ ಮೇಲೆಯೂ ಗುಂಡು ಹಾರಿಸಿದ್ದು, ದನಗಳ್ಳರ ವಾಹನಕ್ಕೆ ನಾಲ್ಕೈದು ಬುಲೆಟ್ ಬಿದ್ದಿವೆ.
ವಾಹನ ನಿಲ್ಲಿಸದೇ ದನಗಳ್ಳರು ಅರಣ್ಯದೊಳಗೆ ನುಗ್ಗಿದ್ದಾರೆ. ಪೊಲೀಸರ ವಾಹನ ಕೂಡ ಅವರನ್ನು ಚೇಸ್ ಮಾಡಿತ್ತು. ಆದರೆ, ಅರಣ್ಯದೊಳಗಿನ ದುರ್ಗಮ ರಸ್ತೆಗಳಲ್ಲಿ ವಾಹನ ಸಂಚರಿಸಲಾಗದ ಕಾರಣ ದನಗಳ್ಳರ ಕಾಡಿನೊಳಗೆ ನುಗ್ಗಿದ್ದಾರೆ.
ಅದೃಷ್ಟವಶಾತ್ ಪೊಲೀಸರಿಗೆ ಯಾವುದೇ ತೊಂದರೆಯಾಗಿಲ್ಲ. ಕಾನ್ಸ್ಟೇಬಲ್ಗಳು ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಲೆಮರೆಸಿಕೊಂಡಿರುವ ದನಗಳ್ಳರಿಗಾಗಿ ಪೊಲೀಸರ ಶೋಧ ಕಾರ್ಯ ಮುಂದುವರೆದಿದೆ. ಈ ಘಟನೆ ಕುರಿತು ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.