ಚಿಕ್ಕಮಗಳೂರು: ಕಾಫಿ ಬೆಳೆಯ ರಕ್ಷಣೆಗೆ ಅಂತಾನೇ ಕಾಫಿ ಬೆಳೆಗಾರರು ಬಂದೂಕಿಗೆ ಪರವಾನಗಿ ಪಡೆದುಕೊಳ್ಳುತ್ತಾರೆ. ಸದ್ಯ ಕಾಫಿನಾಡಿನಲ್ಲಿ ಕಾಫಿ ಕೊಯ್ಲಿನ ಸಮಯ. ಹಾಗಾಗಿ ಕಳ್ಳಕಾಕರಿಂದ ಫಸಲನ್ನು ರಕ್ಷಿಸಿಕೊಳ್ಳುವುದು ಒಂದು ದೊಡ್ಡ ಸವಾಲು. ಆದರೆ ಕಾಫಿ ಬೆಳೆಯ ರಕ್ಷಣೆಗೆ ಅಂತಾ ಪಡೆದುಕೊಂಡಿದ್ದ ಬಂದೂಕನ್ನೇ ಇದೀಗ ಸರೆಂಡರ್ ಮಾಡಿ ಅಂತಾ ಪೊಲೀಸ್ ಇಲಾಖೆ ಫರ್ಮಾನು ಹೊರಡಿಸಿದ್ದು, ಇದು ಕೃಷಿಕರನ್ನು ತಬ್ಬಿಬ್ಬಾಗಿಸಿದೆ.
ಜಿಲ್ಲೆಯಲ್ಲಿ ಕಾಫಿ ಬೆಳೆ ಸೇರಿದಂತೆ ಮೆಣಸು, ಅಡಿಕೆ ಕಟಾವು ಇದೇ ಸಂದರ್ಭದಲ್ಲಿ ನಡೆಯುತ್ತಿರುವುದರಿಂದ ಬೆಳೆಗೆ ಕಳ್ಳಕಾಕರ ಕಾಟ ಹೆಚ್ಚು. ಈ ಹಿನ್ನೆಲೆ ಕಾಫಿ ಬೆಳೆಗಾರರು ತಾವು ಬೆಳೆದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ಬಂದೂಕನ್ನು ಮನೆಯಲ್ಲೇ ಇರಿಸಿಕೊಳ್ಳುವ ಸಂಪ್ರದಾಯವನ್ನು ಹಿಂದಿನಿಂದಲೂ ಅನುಸರಿಸುತ್ತಾ ಬಂದಿದ್ದಾರೆ. ಬಂದೂಕಿನಿಂದ ನೇರವಾಗಿ ಕಳ್ಳರಿಗೆ ಗುಂಡು ಹಾರಿಸದಿದ್ರೂ ಕಾಫಿ ತೋಟದಲ್ಲಿ ಬೆಳೆಗಾರರು ಬಂದೂಕು ಹಿಡ್ಕೊಂಡು ಗಸ್ತು ತಿರುಗ್ತಿದ್ರೆ ಯಾವ ಕಳ್ಳರೂ ಆ ಕಡೆ ಸುಳಿಯಲ್ಲ. ಆದರೆ ಸದ್ಯ ಗ್ರಾಮ ಪಂಚಾಯ್ತಿ ಚುನಾವಣೆಗೆ ದಿನಾಂಕ ನಿಗದಿಯಾಗಿರೋ ಹಿನ್ನೆಲೆ ಪೊಲೀಸ್ ಇಲಾಖೆ ಬಂದೂಕು ಹೊಂದಿರುವವರು ಆಯಾ ಪೊಲೀಸ್ ಠಾಣೆಗಳಲ್ಲಿ ಇರಿಸಬೇಕು ಎಂದು ಸೂಚಿಸಿದೆ.
ನಾವು ಫಸಲನ್ನು ರಕ್ಷಣೆ ಮಾಡಿಕೊಳ್ಳಲು ಪರವಾನಗಿ ಪಡೆದುಕೊಂಡೇ ಬಂದೂಕು ಇಟ್ಟುಕೊಂಡಿದ್ದೇವೆ. ಆದರೆ ಇದೀಗ ಫಸಲು ಕೊಯ್ಲಿನ ಸಮಯದಲ್ಲೇ ಬಂದೂಕನ್ನು ಸರೆಂಡರ್ ಮಾಡಲು ಸೂಚಿಸಿದ್ದಾರೆ. ತೋಟ, ಮನೆಯ ಮುಂಭಾಗದ ಕಣ, ಗೋದಾಮುಳಲ್ಲಿ ಕಾಫಿ, ಮೆಣಸಿನ ಫಸಲಿದೆ. ಒಂದು ವೇಳೆ ಕಳ್ಳತನವಾದರೆ ಯಾರು ಹೊಣೆ ಅನ್ನೋದು ಕಾಫಿ ಬೆಳೆಗಾರರ ಪ್ರಶ್ನೆಯಾಗಿದೆ.