ಚಿಕ್ಕಮಗಳೂರು: ನಾವೆಲ್ಲ ಕೈಗಡಿಯಾರ, ದೊಡ್ಡ ದೊಡ್ಡ ಗಡಿಯಾರಗಳನ್ನು ತಯಾರಿಸುವುದನ್ನು ನೋಡಿದ್ದೇವೆ. ಆದರೆ ವಿಶೇಷಚೇತನ ವ್ಯಕ್ತಿಯೊಬ್ಬರು ಬೋರ್ವೇಲ್ ಪೈಪ್, ಸೈಕಲ್ ಚೈನ್, ಕಬ್ಬಿಣದ ರಾಡ್, ಸ್ಟೀಲ್ ಪಾತ್ರೆ, ಆಟೋ-ಕಾರ್ ಬೇರಿಂಗ್ ವಸ್ತುಗಳನ್ನು ಬಳಸಿಕೊಂಡು ಕಬ್ಬಣದ ವಸ್ತುಗಳಿಂದ ಗಡಿಯಾರ ತಯಾರಿಸಿ ಗಮನ ಸೆಳೆಯುತ್ತಿದ್ದಾರೆ.
ಚಿಕ್ಕಮಗಳೂರಿನ ದಂಟರಮಕ್ಕಿ ನಿವಾಸಿ ವಿಜಯ್ ವಿಶೇಷಚೇತನ ವ್ಯಕ್ತಿ. ಇವರಿಗೆ ಹುಟ್ಟಿನಿಂದಲೂ ಮಾತು ಬರಲ್ಲ, ಕಿವಿಯೂ ಕೇಳಿಸಲ್ಲ. ಕಳೆದ 25 ವರ್ಷಗಳಿಂದ ಗಡಿಯಾರ ರಿಪೇರಿ ಮಾಡುವ ವೃತ್ತಿ ಮಾಡುತ್ತಿದ್ದಾರೆ. ಇದರ ಜೊತೆಗೆ ಹಲವು ರೀತಿಯ ಗಡಿಯಾರಗಳನ್ನು ಆವಿಷ್ಕರಿಸುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ನೀರಲ್ಲಿ ಓಡುವ ಗಡಿಯಾರ, ಮರಳಿನ ಗಡಿಯಾರ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅನೇಕ ಗಡಿಯಾರಗಳನ್ನು ಮಾರಾಟ ಮಾಡುವ ಮೂಲಕ ಅಂಗವೈಕಲ್ಯತೆ ಮೆಟ್ಟುನಿಂತು ಬದುಕು ಕಟ್ಟಿಕೊಂಡಿದ್ದಾರೆ.
ಟವರ್ ಕ್ಲಾಕ್ ಮಾಡಬೇಕು ಅನ್ನೋದು ಇವರ ಲೈಫ್ಟೈಂ ಕನಸಂತೆ. ಅದಕ್ಕಾಗಿ ಏಳು ವರ್ಷಗಳಿಂದ ಗೂಗಲ್, ಯೂಟ್ಯೂಬ್‍ಗಳಲ್ಲಿ ಹುಡುಕಿ ಅಲ್ಲಿ ನೋಡಿದಂತೆ ಸ್ಕೆಚ್ ಹಾಕಿಕೊಂಡು ಇಂದು ಅದೇ ರೀತಿ ಗಡಿಯಾರ ತಯಾರಿಸಿದ್ದಾರೆ. ಯಾವುದೇ ಬಂಡವಾಳ ಹಾಕದೆ ಕಾರು, ಬೈಕ್, ಸೈಕಲ್, ಲಾರಿಯ ಅನುಪಯುಕ್ತ ಬೋರ್‍ವೆಲ್ ಪೈಪ್, ಸ್ಟೀಲ್ ಪಾತ್ರೆ ಸೇರಿದಂತೆ ಸುಮಾರು 50-60 ಕೆಜಿ ಕಬ್ಬಿಣದಿಂದ ಟವರ್ ಕ್ಲಾಕ್ ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ.
ವಿಜಯ್ ಅವರಿಗೆ ಈ ಟವರ್ ಗಡಿಯಾರವನ್ನು ಧರ್ಮಸ್ಥಳಕ್ಕೆ ಕೊಡಬೇಕು ಎಂಬ ಕನಸಿತ್ತು. ತಿಂಗಳಿಗೊಮ್ಮೆ ಕೀ ಕೊಡುವಂತೆ ಗಡಿಯಾರವನ್ನು ಸಂಶೋಧಿಸಿ ಧರ್ಮಸ್ಥಳದ ನಾಲ್ಕು ದಿಕ್ಕಿನಲ್ಲೂ ಸಮಯ ನೋಡುವಂತೆ ಗಡಿಯಾರ ತಯಾರಿಸೋಕೆ ಚಿಂತನೆ ಮಾಡಿದ್ದರು. ಆದರೆ ಜಾಗದ ಸಮಸ್ಯೆಯಿಂದ ಅದು ಸಾಧ್ಯವಾಗಿಲ್ಲ. ಹೀಗಾಗಿ ಅದನ್ನು ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಇವರು ಈ ಗಡಿಯಾರ ನಿರ್ಮಿಸೋಕೆ ಏಳು ವರ್ಷಗಳನ್ನು ತೆಗೆದುಕೊಂಡಿದ್ದು ಯೂಟ್ಯೂಬ್‍ಗಳಲ್ಲಿ ನೋಡಿ ಸ್ಕೆಚ್ ಹಾಕಿಕೊಂಡು ದಿನಕ್ಕೊಂದು ಹೊಸ-ಹೊಸ ರೀತಿಯಲ್ಲಿ ನೋಡಿ ಅಂತಿಮವಾಗಿ ಬೃಹತ್ ಗಡಿಯಾರ ನಿರ್ಮಿಸಿದ್ದಾರೆ.
ಹುಟ್ಟಿನಿಂದಲೂ ಮಾತು ಬಾರದ ವಿಜಯ್ ಬದುಕುವ ಹಂಬಲದಿಂದ ಗಡಿಯಾರ ರಿಪೇರಿ ಕಲಿತಿದ್ದು, ಅಂಗಡಿ ಮಾಡಿ ಬದುಕು ಕಟ್ಟಿಕೊಂಡು ಹೊಸ-ಹೊಸ ಗಡಿಯಾರಗಳನ್ನು ಸಂಶೋಧನೆ ಮಾಡುತ್ತಿದ್ದಾರೆ.