ಚಿಕ್ಕಮಗಳೂರು : ಕೇಂದ್ರ- ರಾಜ್ಯ ಸರ್ಕಾರಗಳಿಂದ ಆದೇಶವಿಲ್ಲದಿದ್ರೂ ಕಡೂರು ತಾಲೂಕಿನ ಪಿಳ್ಳೇನಹಳ್ಳಿ ಗ್ರಾಮದಲ್ಲಿ ಲಾಕ್‌ಡೌನ್ ಜಾರಿಯಾಗಿದೆ. ಬರೋಬ್ಬರಿ ಸಾವಿರಕ್ಕೂ ಹೆಚ್ಚು ಮನೆಗಳಿವೆ. 4 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಅಲ್ಲದೇ ಇದೇ ಊರಿನ ಮೂಲಕ ಹುಲಿಕೆರೆ, ನಾಗೇನಹಳ್ಳಿ ಸೇರಿ ಹತ್ತಾರು ಹಳ್ಳಿಯ ಜನ ಓಡಾಡುತ್ತಾರೆ. ಇಷ್ಟೆಲ್ಲಾ ಜನರ ಓಡಾಟ ಇದ್ದರೂ ಕೂಡ ಸದ್ಯ ಈ ಊರು ಕಂಪ್ಲೀಟ್ ಲಾಕ್ ಆಗಿದೆ.
ಅಂಗಡಿಗಳು ಬೆಳಗ್ಗೆ 7 ರಿಂದ 10 ಗಂಟೆ ತನಕ ಮಾತ್ರ ಓಪನ್ ಮಾಡಲು ಅವಕಾಶವಿದೆ. ರೈತರು ಹೊಲ ಗದ್ದೆ, ಹಾಲು ಹಾಕೋಕೆ ಹೋಗಬೇಕು ಅಂದ್ರೆ ಮಾಸ್ಕ್ ಹಾಕಿಕೊಂಡೇ ಹೋಗಬೇಕು. ಸುಮ್ ಸುಮ್ನೆ ಯಾರೂ ಗುಂಪಾಗಿ ಸೇರಿ ಹರಟೆ ಹೊಡೆಯೋ ಹಾಗೆ ಇಲ್ಲ. ಹೀಗೆ ಹಲವಾರು ಸ್ವಯಂ ಪ್ರೇರಿತ ರೂಲ್ಸ್ ವಿಧಿಸಿಕೊಂಡು ಈ ಊರಿನ ಜನ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.
ಈ ರೀತಿ ಜನ ಸ್ವಯಂ ಲಾಕ್‌ಡೌನ್ ವಿಧಿಸಿಕೊಳ್ಳಲು ಕಾರಣ ಸಿರಿಗೆರೆಯ ಶ್ರೀಗಳು. ಸಾವಿರಾರು ಜನಸಂಖ್ಯೆ ಇರೋ ಈ ಗ್ರಾಮದಲ್ಲೂ ಮೂವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ಎಚ್ಚೆತ್ತ ಗ್ರಾಮಸ್ಥರು ಅಸಡ್ಡೆ ತೋರಿದ್ರೆ ಕೊರೊನಾ ಯಾರನ್ನೂ ಬಿಡಲ್ಲ.
ನಮ್ಮ ಜಾಗೃತಿ ನಾವೇ ಮಾಡಿಕೊಳ್ಳಬೇಕು ಅನ್ನೋ ದಿಟ್ಟ ನಿರ್ಧಾರವನ್ನ ಶ್ರೀಗಳ ಸೂಚನೆ ಹಿನ್ನೆಲೆ ತೆಗೆದುಕೊಂಡು ಸ್ವಯಂ ಲಾಕ್‌ಡೌನ್ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಸದ್ಯಕ್ಕೆ 21 ದಿನಗಳವರೆಗೆ ಸ್ವಯಂ ಲಾಕ್‌ಡೌನ್ ಮಾಡಿಕೊಂಡಿರೋ ಗ್ರಾಮಸ್ಥರು ಅಗತ್ಯ ಬಿದ್ದರೆ ಮುಂದೂಡುವ ಚಿಂತನೆ ಕೂಡ ನಡೆಸಿದ್ದಾರೆ.