ETV Bharat / state

ಹಳದಿ ಎಲೆ ರೋಗದಿಂದಾಗಿ ವೃದ್ಧಾಶ್ರಮವಾಗ್ತಿದೆ ಮಲೆನಾಡು; ಬದುಕಿ ಬಾಳಿದ ಮನೆಗಳೀಗ ಬರಿದು! - ಹಳದಿ ಎಲೆ ರೋಗ

ಕೊಪ್ಪ ತಾಲೂಕಿನ ಜಯಪುರ ಸಮೀಪದ ಹುಲಿಗರಡಿ ಗ್ರಾಮದಲ್ಲಿ ಹಳದಿ ಎಲೆ ರೋಗ ಕಾಣಿಸಿಕೊಂಡಿದೆ. ಜನರು ಜಮೀನಿಗೆ ಹೋಗುತ್ತಿಲ್ಲ, ಗುಳೇ ಹೊರಟಿದ್ದಾರೆ!.

ಹುಲಿಗರಡಿ ಗ್ರಾಮ
ಹುಲಿಗರಡಿ ಗ್ರಾಮ
author img

By ETV Bharat Karnataka Team

Published : Aug 25, 2023, 9:45 PM IST

ಹುಲಿಗರಡಿ ಗ್ರಾಮಸ್ಥ ಸುರೇಶ್​ ಹೇಳಿಕೆ

ಚಿಕ್ಕಮಗಳೂರು : ಮಲೆನಾಡ ಮನೆಗಳಂದ್ರೆ ಹೆಂಚಿನ ಸಂದಿಯಲ್ಲಿ ಸದಾ ಹೊಗೆಯಾಡ್ತಿರುತ್ತೆ. ಮನೆ ಸುತ್ತಲೂ ತಣ್ಣನೆಯ ಗಾಳಿ ಬೀಸುತ್ತಿರುತ್ತೆ. ಅಡುಗೆ ಮನೆ ಪಾತ್ರೆಗಳ ದಡಬಡ ಸದ್ದಾಗುತ್ತದೆ. ಕೊಟ್ಟಿಗೆಯಲ್ಲಿ ದನಕರುಗಳ ಶಬ್ದ ಕೇಳಿಸುತ್ತೆ. ತೋಟದಲ್ಲಿ ಮಾಲೀಕರು-ಕಾರ್ಮಿಕರ ಕೂಗಾಟವೆಲ್ಲ ಇಲ್ಲಿ ಸಾಮಾನ್ಯ. ಅಂಗಳದಲ್ಲಿ ಪಕ್ಷಿಗಳೊಂದಿಗೆ ಮಕ್ಕಳು-ಮೊಮ್ಮಕ್ಕಳ ತೊದಲುನುಡಿಯದ್ದೇ ನಿನಾದ ಕೇಳಿಸುತ್ತದೆ. ಇದುವೇ ಮಲೆನಾಡ ನೈಜ ವಾತಾವರಣ. ಇಂತಹ ಸುಂದರ ಬದುಕಿನ ಮಲೆನಾಡ ಗ್ರಾಮಗಳಿಂದು ವೃದ್ಧಾಶ್ರಮಗಳಾಗುತ್ತಿವೆ. ಲವಲವಿಕೆಯಿಂದಿರುತ್ತಿದ್ದ ಗ್ರಾಮಗಳಲ್ಲೀಗ ಪಾಳುಬಿದ್ದ ಮನೆಗಳದ್ದೇ ಪಾರುಪತ್ಯ.

ಇಂದು ಮನೆಯ ಹೆಂಚಿನ ಸಂದಿಯಲ್ಲಿ ಒಲೆ ಹೊಗೆ ಇಲ್ಲ. ಜೇಡರ ಬಲೆ ಕಾಣುತ್ತೆ. ಅಡುಗೆ ಮನೆಯಲ್ಲಿ ಪಾತ್ರೆಗಳ ಸಪ್ಪಳವಿಲ್ಲ, ಕ್ರಿಮಿ-ಕೀಟಗಳದ್ದೇ ಕೂಗಾಟ. ದನ-ಕರುಗಳಿರಬೇಕಾದ ಕೊಟ್ಟಿಗೆಯಲ್ಲಿ ಹಾವು-ಚೇಳು-ಕಪ್ಪೆಗಳ ಆವಾಸಸ್ಥಾನ. ಅರಿಶಿನ-ಕುಂಕುಮ, ರಂಗೋಲಿಯಿಂದ ತುಂಬಿ-ತುಳುಕ್ತಿದ್ದ ಹೊಸ್ತಿಲಲ್ಲಿ ಮುತ್ತೈದೆತನವೇ ಇಲ್ಲ. ಇದು ಇಂದಿನ ಮಲೆನಾಡ ಪರಿಸ್ಥಿತಿ. ನಿತ್ಯ ನೂರಾರು ಜನರಿಗೆ ಅನ್ನ ಹಾಕುತ್ತಿದ್ದ ಮಲೆನಾಡ ಪುರಾತನ ಮನೆಗಳಿಂದು ಪಾಳುಬಿದ್ದು ಲೂಟಿಹೊಡೆದ ಕೋಟೆಯಂತಾಗಿವೆ!.

ಅಡಿಕೆಗೆ ತಗುಲಿರುವ ಹಳದಿ ಎಲೆರೋಗವನ್ನು ನಿಯಂತ್ರಿಸಲಾಗದೆ ಮಲೆನಾಡ ನೂರಾರು ಮಂದಿ ಬದುಕಿ-ಬಾಳಿದ್ದ ಮನೆಗಳನ್ನು ಮಾತ್ರವಲ್ಲ, ಊರನ್ನೇ ಬಿಡುತ್ತಿದ್ದಾರೆ. ಇದು ಕೊಪ್ಪ ತಾಲೂಕಿನ ಜಯಪುರ ಸಮೀಪದ ಹುಲಿಗರಡಿ ಗ್ರಾಮದ ದುಸ್ಥಿತಿ.

ನೂರಾರು ಜನ ಊರು ಬಿಟ್ಟರೆ, ಮತ್ತೆ ಹಲವರು ತೋಟಗಳತ್ತ ಮುಖ ಮಾಡೋದನ್ನೇ ಮರೆತಿದ್ದಾರೆ. ಅನಾದಿ ಕಾಲದಿಂದಲೂ ಬದುಕಿ ಸಂಭ್ರಮಿಸಿದ್ದ ಮನೆಗಳೆಲ್ಲ ಬಿಕೋ ಎನ್ನುತ್ತಿವೆ. ತುತ್ತಿನ ಚೀಲಕ್ಕಾಗಿ ಅವರೆಲ್ಲಾ ಗುಳೇ ಹೋಗ್ತಿದ್ದಾರೆ. ದೇವರ ಫೋಟೋಗಳು, ಮಕ್ಕಳು ಓದಿದ ಪುಸ್ತಕಗಳು, ಅಡಿಗೆ ಪಾತ್ರೆಗಳು, ಪಾಳು ಬಿದ್ದ ರೈತನ ಮನೆಯ ನೆನಪಾಗುಳಿದಿವೆ.

ಹುಲಿಗರಡಿ ಗ್ರಾಮಸ್ಥ ರವಿಶಂಕರ್ ಹೇಳಿಕೆ

ಐದು ದಶಕಗಳಿಂದ ದಿನದಿನಕ್ಕೆ ಹೆಚ್ಚುತ್ತಿರುವ ಹಳದಿ ಎಲೆ ರೋಗದಿಂದ ಬೆಳೆಗಾರರಿಗೆ ಕೃಷಿ ಬಗ್ಗೆಯೇ ಬೇಜಾರು ಮೂಡಿಸಿದೆ. ಕಿವಿಗೆ ಬಿದ್ದ ಔಷಧಿಯನ್ನೆಲ್ಲ ಸಿಂಪಡಿಸಿದ್ರೂ ರೈತರ ಜೇಬು ಬರಿದಾಯ್ತೇ ವಿನಃ ರೋಗ ನಿಯಂತ್ರಣಕ್ಕೆ ಬಾರಲೇ ಇಲ್ಲ. ಶೃಂಗೇರಿ-ಕೊಪ್ಪ-ಎನ್.ಆರ್ ಪುರ ತಾಲೂಕಿನ ಹಲವು ಭಾಗದಲ್ಲಿ ಹಳದಿ ಎಲೆ ಹಾಗೂ ಎಲೆಚುಕ್ಕಿ ರೋಗವೇ ಪಾರುಪತ್ಯ ಮೆರೆಯುತ್ತಿದೆ. ಸಂಶೋಧನಾ ಕೇಂದ್ರಕ್ಕೆ ಔಷಧಿ ಸಂಶೋಧನೆಗೆಂದು ಬಂದ ಕೋಟಿಗಟ್ಟಲೆ ಹಣವನ್ನು ಹಳದಿ ಎಲೆ ರೋಗವೇ ತಿಂದಾಕಿದೆ.

ಬ್ಯಾಂಕ್ ಸಾಲದ ಜೊತೆ ಅಡವಿಟ್ಟ ಹೆಂಡತಿ ಮಕ್ಕಳ ಒಡವೆ ಬಿಡಿಸೋಕೂ ಆಗದ ಸಂದಿಗ್ಧ ಪರಿಸ್ಥಿತಿಗೆ ಬೆಳೆಗಾರರು ಬಂದಿದ್ದಾರೆ. ಹಾಗಾಗಿ, ಸಾಲದ ಶೂಲಕ್ಕೆ ಸಿಕ್ಕ ಬೆಳೆಗಾರರು ಹೊರಬರಲಾಗದೆ ಬದುಕುವ ಅನಿವಾರ್ಯತೆಗೆ ಊರುಬಿಟ್ಟು ಸಿಕ್ಕ ಸಿಕ್ಕ ಕೆಲಸ ಮಾಡುತ್ತಿದ್ದಾರೆ. ಅಡುಗೆ ಭಟ್ಟ ವೃತ್ತಿ, ಅರ್ಚಕರ ವೃತ್ತಿ ಸೇರಿದಂತೆ ನಾನಾ ವೃತ್ತಿ ಮಾಡುತ್ತಿದ್ದಾರೆ. ಅಳಿದುಳಿದಿರುವ ತೋಟಗಳನ್ನು ಉಳಿಸಿಕೊಳ್ಳೋಕೆ ಬೆಳೆಗಾರರು ಇಂದಿಗೂ ಹೋರಾಡ್ತಿದ್ದಾರೆ.

''ಹುಲಿಗರಡಿ ಗ್ರಾಮದಲ್ಲಿ ಅಡಿಕೆ ತೋಟವನ್ನು ನಂಬಿಕೊಂಡೇ ಇದ್ದೆವು. ಈಗ ನಂಬಿಕೊಂಡಿರಲು ಆಗಲ್ಲ. ಎಲ್ಲರೂ ಊರು ಬಿಟ್ಟು ಹೋಗುತ್ತಿದ್ದೇವೆ. ಸರ್ಕಾರದಿಂದ ಏನಾದ್ರೂ ಸೌಲಭ್ಯ ಬರುತ್ತದೆಯೇ ಎಂಬುದನ್ನು ನೋಡುವುದನ್ನು ಬಿಟ್ಟರೆ ನಮಗೆ ಬೇರೇನೂ ದಾರಿ ಕಾಣದು'' ಎಂದು ಗ್ರಾಮಸ್ಥ ಸುರೇಶ್​ ಬೇಸರಿಸಿದರು.

ಎಲೆ ಚುಕ್ಕಿ ರೋಗದಿಂದ ಇಳುವರಿ ಕುಸಿತ: ಮಲೆನಾಡಲ್ಲಿ 3-5 ಎಕರೆ ತೋಟಗಳ ಮೂಲಕ ಬದುಕು ಕಟ್ಟಿಕೊಂಡ ಸಣ್ಣ ಬೆಳೆಗಾರರೇ ಹೆಚ್ಚು. ಬದುಕಿನ ಆಸರೆಯೂ ಅದೇ. ವರ್ಷಕ್ಕೆ 12-15 ಕ್ವಿಂಟಲ್ ಒಣ ಅಡಿಕೆ ಆಗ್ತಿದ್ದ ತೋಟಗಳಿಂದು ರೋಗದಿಂದ 2-3 ಕ್ವಿಂಟಲ್‍ಗೆ ಬಂದಿಳಿವೆ. ಹಳದಿ ಎಲೆ ರೋಗ-ಕೊಳೆ ರೋಗ-ಎಲೆ ಚುಕ್ಕಿ ರೋಗಕ್ಕೆ ಮಲೆನಾಡಿಗರು ಬದುಕನ್ನೇ ಕಳೆದುಕೊಳ್ಳುವ ದಯನೀಯ ಸ್ಥಿತಿ ತಲುಪಿದ್ದಾರೆ.

ಇದನ್ನೂ ಓದಿ: ಅಡಕೆ ಹಳದಿ ಎಲೆ ರೋಗ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಿ: ತೋಟಗಾರಿಕಾ ಇಲಾಖೆ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.