ಚಿಕ್ಕಮಗಳೂರು: ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡಿ ಎಂದು ಆದೇಶ ಹೊರಡಿಸಿದೆ. ಇದಕ್ಕೆ ಬೆಲೆ ಕೊಡದ ಕೆಲವರು ತಮ್ಮ ವಾಹನವನ್ನು ರಸ್ತೆಗೆ ಇಳಿಸುತ್ತಿದ್ದಾರೆ. ಹೀಗಾಗಿ ಕಾರ್ಯಾಚರಣೆಗಿಳಿದಿರುವ ಪೊಲೀಸರು, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಬರುತ್ತಿರುವ ವಾಹನಗಳನ್ನು ತಡೆದು ನಿಲ್ಲಿಸುತ್ತಿದ್ದಾರೆ. ಸಂಡೆ ಲಾಕ್ ಡೌನ್ ಇದ್ದರೂ ವಾಹನಗಳನ್ನೇಕೆ ರಸ್ತೆಗೆ ತಂದಿದ್ದೀರಿ ಎಂದು ವಾಹನ ಮಾಲೀಕರಿಗೆ ಪ್ರಶ್ನೆ ಮಾಡುತ್ತಿದ್ದಾರೆ.
ಮಂಗಳೂರು ಭಾಗದಿಂದ ಚಿಕ್ಕಮಗಳೂರು ಜಿಲ್ಲೆಗೆ ಬರುವ ವಾಹನಗಳನ್ನು ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ತಡೆಯುವ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ಹಿನ್ನೆಲೆ ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ಅನವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಿರುವ ಜನರಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.
ಅವಶ್ಯ ಹಾಗೂ ತುರ್ತು ಕಾರಣದಿಂದ ಹೊರ ಬಂದ ವಾಹನಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತಿದೆ. ಉಳಿದ ವಾಹನಗಳನ್ನು ತಡೆದು ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿ ನಿಲ್ಲಿಸಲಾಗಿದೆ.