ಚಿಕ್ಕಮಗಳೂರು: ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದರೆ ಉತ್ತಮ ಶಿಕ್ಷನ ಲಭಿಸಿ ಮಕ್ಕಳ ಭವಿಷ್ಯ ಉತ್ತಮವಾಗಲಿದೆ ಎಂಬುದು ಹೆಚ್ಚಿನ ಪೋಷಕರ ನಂಬಿಕೆ. ಹಾಗಾಗಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗಿತ್ತು. ಆದರೀಗ ಕೊರೊನಾ ಕರಿಛಾಯೆಯಿಂದ ಅರ್ಥ ವ್ಯವಸ್ಥೆ ಮತ್ತು ಸಾರ್ವಜನಿಕರ ಆದಾಯ ಬುಡಮೇಲಾಗಿದೆ. ಹಾಗಾಗಿ ಹೆಚ್ಚಿನ ಪೋಷಕರು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ.
ಹೌದು, ಈ ವರ್ಷ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ 1,436 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, 104 ಪ್ರೌಢ ಶಾಲೆಗಳಿವೆ. ಅನುದಾನ ರಹಿತ ಶಾಲೆಗಳು 104 ಇದೆ. ಈಗಾಗಲೇ ಈ ವರ್ಷ ರಾಜ್ಯ ಸರ್ಕಾರ ವಿದ್ಯಾಗಮ ಯೋಜನೆಯನ್ನು ಜಾರಿಗೆ ತಂದಿರುವುದರಿಂದ ಹಾಗೂ ಕೋವಿಡ್ ಇರುವ ಹಿನ್ನೆಲೆ ಬೇರೆ ಬೇರೆ ಶಾಲೆಗಳಿಂದ 1,430ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಬಂದಿದ್ದಾರೆ.
ಕೋವಿಡ್ ಹಿನ್ನೆಲೆ ನಗರದಿಂದ ತಮ್ಮೂರಿಗೆ ಜನರು ವಾಪಸಾಗುತ್ತಿದ್ದಾರೆ. ಆರ್ಥಿಕ ಸಮಸ್ಯೆ ಕಾರಣ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಈಗಾಗಲೇ ಪ್ರವೇಶ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಅಂತಹ ಮಕ್ಕಳಿದ್ದರೆ ನೇರವಾಗಿ ಶಾಲೆಗೆ ಬಂದು ಮುಖ್ಯ ಶಿಕ್ಷಕರಿಗೆ ಭೇಟಿಯಾದರೆ ಸಾಕು ಮಕ್ಕಳಿಗೆ ಶಾಲೆಗೆ ಪ್ರವೇಶ ನೀಡಲಾಗುವುದು ಎಂದು ಡಿಡಿಪಿಐ ಮಲ್ಲೇಶಪ್ಪ ತಿಳಿಸಿದರು.
ಕೊವೀಡ್-19 ನಿಂದ ಶಿಕ್ಷಣ ಇಲಾಖೆಗೆ ದೊಡ್ಡ ಸವಾಲು ಎದುರಾಗಿದ್ದು, ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡು ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಆದ್ರೆ, ರಾಜ್ಯ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ವಿದ್ಯಾಗಮ ಎಂಬ ಯೋಜನೆ ಜಾರಿಗೆ ತಂದಿದೆ. ಈ ಕಾರ್ಯಕ್ರಮದಲ್ಲಿ ಜನವಸತಿ ಪ್ರದೇಶಕ್ಕೆ ಹೋಗಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.
ಇದರಲ್ಲಿ ಮೂರು ತರಹದ ಗುಂಪುಗಳನ್ನು ಮಾಡಿಕೊಳ್ಳಲಾಗಿದೆ. ಮೊದಲನೇ ಗುಂಪಿನಲ್ಲಿ ಇಂಟರ್ನೆಟ್, ಮೊಬೈಲ್ ಸಂಪರ್ಕ ಇಲ್ಲದ ಗುಂಪು. ಈ ಗುಂಪನ್ನು ಜೀನಿಯಸ್ ಗುಂಪು ಎಂದು ಕರೆಯುತ್ತೇವೆ. ಈ ಗುಂಪಿಗೆ ಶಿಕ್ಷಕರೇ ವಿದ್ಯಾರ್ಥಿಗಳ ಮನೆಗಳ ಬಳಿ ಹೋಗಿ ಪಾಠ ಮಾಡಿ ಬರುತ್ತಾರೆ. ಎರಡನೇ ಗುಂಪು ಬ್ರಿಲಿಯಂಟ್ ಗುಂಪು. ಈ ಗುಂಪು ಮೊಬೈಲ್ ಇಟ್ಟುಕೊಂಡಿರುತ್ತಾರೆ. ಅಂತಹವರಿಗೆ ಮೊಬೈಲ್ ಮೂಲಕ ಪಾಠವನ್ನು ಕಳುಹಿಸಿಕೊಡಲಾಗುತ್ತದೆ. ಇನ್ನು ಮೂರನೇ ಗುಂಪು ಎಲ್ಲಾ ಸೌಲಭ್ಯ ಇರುವ ಗುಂಪು. ಈ ಗುಂಪಿಗೆ ಇಂಟಲಿಜೆಂಟ್ ಗುಂಪು ಎಂದು ಕರೆಯಲಾಗುತ್ತದೆ. ಇಂತಹ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿಯೇ ಶಿಕ್ಷಣ ನೀಡಲಾಗುತ್ತದೆ. ಇಲ್ಲಿ ದೀಕ್ಷಾ ಆ್ಯಪ್ ಮೂಲಕ ಪಾಠ ಹೇಳಿಕೊಡಲಾಗುತ್ತಿದೆ. ಕೋವಿಡ್ ಹಿನ್ನೆಲೆ ಬಹಳಷ್ಟು ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಇಂತಹ ವಿಶೇಷ ಕಾರ್ಯಕ್ರಮದ ಮೂಲಕ ಮಕ್ಕಳನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.