ಚಿಕ್ಕಮಗಳೂರು: ರಾಜ್ಯಾದ್ಯಂತ ಈಗಾಗಲೇ 2023 ರ ವಿಧಾನಸಭಾ ಚುನಾವಣೆಯ ಚಟುವಟಿಕೆಗಳು ಗರಿಗೆದರಿವೆ. ಚುನಾವಣೆಗೆ ಆರು ತಿಂಗಳು ಇರುವಾಗಲೇ ಮೂಡಿಗೆರೆ ತಾಲೂಕಿನ ಮೀಸಲು ಕ್ಷೇತ್ರಕ್ಕೆ ಮಾಜಿ ಸಚಿವೆ ಮೋಟಮ್ಮ ಪುತ್ರಿ ನಯನಾ ಮೋಟಮ್ಮಗೆ ಟಿಕೆಟ್ ನೀಡುವುದು ಬೇಡ ಎಂದು ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗ ಸಭೆ ನಡೆಸುತ್ತಿದ್ದಾರೆ.
ಟಿಕೆಟ್ ನೀಡದಂತೆ ಮನವಿ ಮಾಡಲು ನಿರ್ಧಾರ: ಚಿಕ್ಕಮಗಳೂರು ತಾಲೂಕಿನ ಮೂಡಿಗೆರೆ ಮತಕ್ಷೇತ್ರ ವ್ಯಾಪ್ತಿಯ ವಸ್ತಾರೆ ಹೋಬಳಿಯಲ್ಲಿ ನಡೆದ ಸಭೆಯಲ್ಲಿ, ಕಾಂಗ್ರೆಸ್ ಕಾರ್ಯಕರ್ತರು ನಯನಾಗೆ ಟಿಕೆಟ್ ನೀಡಿದಂತೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೂ ಮನವಿ ಮಾಡಲು ನಿರ್ಧರಿಸಿದ್ದಾರೆ. ನಯನಾಗೆ ಟಿಕೆಟ್ ನೀಡಿದ್ರೆ ಕಾಂಗ್ರೆಸ್ ಸೋಲು ಖಚಿತ. ಕ್ಷೇತ್ರದ ಜನ ನಯನಾ ಅವರನ್ನು ಒಪ್ಪುತ್ತಿಲ್ಲ. ಪಕ್ಷದ ಕಾರ್ಯ ಕರ್ತರು ಹಾಗೂ ಮುಖಂಡರು ಕೂಡ ನಯನಾಗೆ ಟಿಕೆಟ್ ನೀಡಲು ವಿರೋಧಿಸಿದ್ದಾರೆ.
ಬಹಿರಂಗ ಸಭೆ: ಈಗಾಗಲೇ ಮೋಟಮ್ಮ ಸೋಲು ಕಂಡಿದ್ದಾರೆ. ಈ ಮಧ್ಯೆ ನಾನು ರಾಜಕೀಯದಿಂದ ನಿವೃತ್ತಿಯಾಗಿದ್ದೇನೆ ಎಂದು ಅವರೇ ಹೇಳಿಕೊಂಡಿದ್ದಾರೆ. ಈಗ ಅವರ ಮಗಳಿಗೆ ಟಿಕೆಟ್ ನೀಡಿದರೆ, ಕಾಂಗ್ರೆಸ್ ಪಕ್ಷ ಸೋಲುವುದು ಖಚಿತ. ಹಾಗಾಗಿ, ಸ್ಥಳೀಯರು ಹಾಗೂ ಹೊಸ ಮುಖಕ್ಕೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಆಗ್ರಹಿಸಿ ನಯನಾ ವಿರುದ್ಧ ಬಹಿರಂಗ ಸಭೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನಯನಾ ಮೋಟಮ್ಮಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು: ಕಾಂಗ್ರೆಸ್ ಮುಖಂಡರ ಚರ್ಚೆ
ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ಮೂಡಿಗೆರೆಯಲ್ಲೂ ಸಭೆ ಸೇರಿ ಅಸಮಾಧಾನ ಹೊರ ಹಾಕಿದ್ದರು. ಮುಂದಿನ ವಾರದಲ್ಲಿ ಗೋಣಿಬೀಡು ಹೋಬಳಿಯಲ್ಲೂ ಸಭೆ ಸೇರುವುದಾಗಿ ತೀರ್ಮಾನಿಸಿದ್ದಾರೆ. ನಯನಾ ವಿರುದ್ಧ ಕಾಂಗ್ರೆಸ್ ಹೋಬಳಿಗಳಿಗೆ ಹೋಗಿ ಸಭೆ ನಡೆಸಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಹೊಸ ಮುಖಕ್ಕೆ ಮಣೆ ಹಾಕುವಂತೆ ರಾಜ್ಯ ನಾಯಕರಿಗೆ ಆಗ್ರಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.