ಚಿಕ್ಕಮಗಳೂರು: ಜಿಲ್ಲೆಯ ಹಲವೆಡೆ ಹುಲಿ ಉಗುರು ಪೆಂಡೆಂಟ್, ಕಾಡು ಪ್ರಾಣಿ ಚರ್ಮ ಜಪ್ತಿ ಪ್ರಕರಣಗಳು ಸಾಕಷ್ಟು ಸದ್ದು ಮಾಡಿವೆ. ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಆರೋಪದಡಿ ಇತ್ತೀಚೆಗೆ ಇಬ್ಬರು ಅರ್ಚಕರು ಹಾಗೂ ಕಳಸ ಡಿಆರ್ಎಫ್ಒ ಬಂಧನವಾಗಿತ್ತು. ಬಳಿಕ ಬಾಬಾ ಬುಡನ್ ಸ್ವಾಮಿ ದರ್ಗಾದ ಶಾಖಾದ್ರಿ ಮನೆಯಲ್ಲಿ ಚಿರತೆ ಹಾಗೂ ಜಿಂಕೆ ಚರ್ಮ ಸಿಕ್ಕಿತ್ತು.
ಇದೀಗ ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆ ಒಳಿ ಇರುವ ಶಾಖಾದ್ರಿ ನಿವಾಸಕ್ಕೆ ನೋಟಿಸ್ ಅಂಟಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಬಂಧನ ಆಗುತ್ತಿದ್ದಂತೆ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಸೆಲೆಬ್ರಿಟಿಗಳು ಹಾಗೂ ಸ್ವಾಮೀಜಿಗಳು ಪೆಂಡೆಂಟ್ ಧರಿಸಿರುವ ಫೋಟೊಗಳು ವೈರಲ್ ಆಗಿದ್ದು, ಇಲಾಖೆ ಕ್ರಮ ಕೈಗೊಂಡಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಶಾಖಾದ್ರಿ ಮನೆಯಲ್ಲಿ ಚಿರತೆ, ಜಿಂಕೆ ಚರ್ಮ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು
ಇತ್ತೀಚೆಗೆ ಶಾಖಾದ್ರಿ ಮನೆಯಲ್ಲಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದಾಗ ತಲಾ ಒಂದು ಚಿರತೆ ಹಾಗೂ ಜಿಂಕೆ ಚರ್ಮ ಪತ್ತೆಯಾಗಿತ್ತು. ಈ ವೇಳೆ ಶಾಖಾದ್ರಿ ಮನೆಯಲ್ಲಿ ಇರಲಿಲ್ಲ. ಸಂಬಂಧಿಕರ ಸಮ್ಮುಖದಲ್ಲಿ ಮನೆ ಪರಿಶೀಲನೆ ನಡೆದಿತ್ತು. ಚಿಕ್ಕಮಗಳೂರು ಅರಣ್ಯ ವಲಯ ಅಧಿಕಾರಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಮನೆಗೆ ಬೀಗ ಹಾಕಿ ಶಾಖಾದ್ರಿ ಗೌಸ್ ಮೊಹಿದ್ದೀನ್ ಬೆಂಗಳೂರಿಗೆ ತೆರಳಿದ್ದಾರೆ ಎೞಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಹುಲಿ ಉಗುರು ಪೆಂಡೆಂಟ್ ಪ್ರಕರಣ: ಅರಣ್ಯಾಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ವಕೀಲ