ಚಿಕ್ಕಮಗಳೂರು: ಮಲೆನಾಡಿನ ಕೆಲ ಕುಗ್ರಾಮಗಳ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ಹೌದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಗೋಡು ಗ್ರಾಮದ ಸಮೀಪದ ಅರೆನೂರು ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.
ಸ್ವಾತಂತ್ರ್ಯ ಬಂದಾಗಿನಿಂದಲೂ ಇವ್ರಿಗೆ ಹಳ್ಳದ ಮೇಲೆ ಹಾಕಿರೋ ಮರದ ದಿಣ್ಣೆಯೇ ದಾರಿ. ಸೂಕ್ತ ಸೇತುವೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಬೆಳಗ್ಗೆ ಮಧ್ಯಾಹ್ನವಲ್ಲದೇ ರಾತ್ರಿ ಹೊತ್ತಿನಲ್ಲೂ ಅಗತ್ಯ ಇದೆ. ಇದೇ ದಾರಿ ಮೂಲಕ ಸಂಚರಿಸಬೇಕು.
ಮಾಗೋಡು ಗ್ರಾಮದಿಂದ ಅರೆನೂರು ಮೂಲಕ ಎರಡ್ಮೂರು ಹಳ್ಳಿಗಳಿಗೆ ಸಂಪರ್ಕವಿದೆ. ಅರೆನೂರು ಗ್ರಾಮದಲ್ಲಿ ಸುಮಾರು 35 ಮನೆಗಳಿವೆ. ಬಾಳೆಹೊನ್ನೂರು ಮಾರ್ಗದ ಮಾಗೋಡು ಹೆದ್ದಾರಿಗೆ ಕೇವಲ ಒಂದು ಕಿ.ಮೀ. ಸಂಚಾರ. ಆದರೆ, ಅರೆನೂರು ಗ್ರಾಮದ ಜನ ಮಾಗೋಡಿಗೆ ಬರಬೇಕು ಎಂದರೆ ಸುಮಾರು ಎಂಟು ಕಿ.ಮೀ. ಸುತ್ತಿ ಬರಬೇಕು. ಈ ಹಳ್ಳಕ್ಕೆ ಸೇತುವೆ ನಿರ್ಮಾಣವಾದ್ರೆ ಒಂದೇ ಕಿ.ಮೀ. ಅಂತರದಲ್ಲಿ ಮಾಗೋಡು ಹೆದ್ದಾರಿಗೆ ಬರಬಹುದು. ಆದರೆ, ಶತಮಾನದಿಂದ ಹೀಗೆ ಬದುಕುತ್ತಿದ್ದರೂ ಇವರಿಗೆ ಒಂದು ಸೇತುವೆ ನಿರ್ಮಿಸಿಕೊಡಲು ಯಾರಿಂದಲೂ ಆಗಿಲ್ಲ. ಅಧಿಕಾರಿಗಳು-ರಾಜಕಾರಣಿಗಳು ಅಂಗೈಯಲ್ಲೇ ಸೇತುವೆ ತೋರಿಸ್ತಿದ್ದಾರೆ ಅಂತ ಸ್ಥಳೀಯರು ಅಸಮಧಾನ ಹೊರಹಾಕಿದ್ದಾರೆ..
ಇದನ್ನೂ ಓದಿ: ಗದಗ: ಮಳೆ ನಿಂತರೂ ಕಡಿಮೆಯಾಗದ ಪ್ರವಾಹ ಭೀತಿ..ಮಲಪ್ರಭಾ ಅಬ್ಬರಕ್ಕೆ ಜನ - ಜೀವನ ಅಸ್ತವ್ಯಸ್ತ
ಈ ಗ್ರಾಮದ ಮಕ್ಕಳು ಮಳೆಗಾಲದಲ್ಲಿ ಮೂರ್ನಾಲ್ಕು ತಿಂಗಳು ಶಾಲೆಗೆ ಹೋಗಲ್ಲ. ಯಾರಿಗಾದರೂ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದರೆ ಜೋಳಿಗೆ ಕಟ್ಟಿಕೊಂಡು ಹೋಗಬೇಕು. ಈ ಹಳ್ಳದಲ್ಲಿ ಹೋಗುವಾಗ ಕೆಲವರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗದೇ ಸಾವನ್ನಪ್ಪಿದ ಉದಾಹರಣೆಯೂ ಉಂಟು. ಹೀಗೆ ಸಮಸ್ಯೆಗಳ ನಡುವೆಯೇ ಅರೆನೂರು ಗ್ರಾಮಸ್ಥರು ಜೀವನ ಸಾಗಿಸ್ತಿದ್ದಾರೆ..