ಚಿಕ್ಕಮಗಳೂರು : ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ದಿನದಿಂದ ದಿನಕ್ಕೆ ಗರಿಗೆದರುತ್ತಿದ್ದು, ಮಾಜಿ ಸಚಿವೆ ಮೋಟಮ್ಮ ಅವರ ಮಗಳು ನಯನ ಅವರಿಗೆ ಟಿಕೆಟ್ ನೀಡಬಾರದು ಎಂದು ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರಿಂದಲೇ ಅಪಸ್ವರ ಎದ್ದಿದೆ. ನಯನಾ ಮೋಟಮ್ಮ ವಿರುದ್ಧ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಯನ ಮೋಟಮ್ಮ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದು, ಸದ್ಯ ಅವರು ಕೂಡ ಕ್ಷೇತ್ರದಲ್ಲಿ ಜನ ಸೇವೆಯಲ್ಲಿ ತೊಡಗಿದ್ದಾರೆ. ಆದರೆ ಈ ಬಗ್ಗೆ ಕ್ಷೇತ್ರದ ಕಾಂಗ್ರೆಸ್ ಮುಖಂಡರಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.
ಮೂಡಿಗೆರೆ ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಮನೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿರುವ ಮುಖಂಡರೋರ್ವರು, ನಯನಾ ಮೋಟಮ್ಮ ಸೋಲುವ ಕ್ಯಾಂಡಿಡೇಟ್. ಈ ವಿಚಾರ ಮಾಧ್ಯಮಗಳಲ್ಲಿ ಬಂದರೂ ಯಾವುದೇ ಅಭ್ಯಂತರವಿಲ್ಲ. ನಯನಾ ಮೋಟಮ್ಮ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ. ಅವರು ಇನ್ನೂ ಪಕ್ಷಕ್ಕಾಗಿ ದುಡಿಯಬೇಕು. ಅವರು ರಾಜಕೀಯವಾಗಿ ಹೆಚ್ಚು ಬೆಳವಣಿಗೆಯಾಗಲಿ. ಈ ವಿಚಾರ ಬೆಂಗಳೂರಿನ ನಾಯಕರುಗಳಿಗೆ ಗೊತ್ತಾಗಬೇಕು. ಮೂಡಿಗೆರೆಯಲ್ಲಿ ಯಾರನ್ನಾದರೂ ಅಭ್ಯರ್ಥಿಯನ್ನಾಗಿ ಮಾಡಲಿ. ಆದರೆ ಸೋಲುವವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಡಿ ಎಂದಿದ್ದಾರೆ.
ಇನ್ನು, ಈ ಬಗ್ಗೆ ಹೋಬಳಿ ಮಟ್ಟದಲ್ಲಿ ಸಭೆ ಮಾಡೋಣ. ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸೋಣ. ನಯನಾ ಮೋಟಮ್ಮ ಮಾತ್ರ ಅಭ್ಯರ್ಥಿ ಆಗೋದು ಬೇಡ ಎಂಬುದು ನಮ್ಮ ನಿರ್ಣಯ. ಅವರು ಗೆಲ್ಲುವುದಿಲ್ಲ, ಅವರ ವಿರುದ್ಧ ಜನಾಭಿಪ್ರಾಯವಿದೆ. ಅವರ ಸಮಾಜದ ಮನೆಗಳಿಗೆ ಹೋದರೆ ಅವರನ್ನು ಒಪ್ಪಿಕೊಳ್ಳುವುದಿಲ್ಲ. ನಯನಾ ಮೋಟಮ್ಮರಿಗೆ 20 ಬಾರಿ ಟಿಕೆಟ್ ನೀಡಿದರೂ ಅವರು ಗೆಲ್ಲುವುದಿಲ್ಲ. ಅವರು ಎಲ್ಲಿಂದ ಬಂದರೋ ಅಲ್ಲಿಗೆ ವಾಪಸ್ ಹೋಗಲಿ ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ಇದನ್ನೂ ಓದಿ : ಈ ದೌಲತ್ತು ಹೆಚ್ಚು ದಿನ ನಡೆಯಲ್ಲ.. ಶಾಸಕ ಪ್ರೀತಂ ಗೌಡ ವಿರುದ್ಧ ಸ್ವಪಕ್ಷೀಯ ಎಂಎಲ್ಎ ನಾಗೇಂದ್ರ ಗರಂ