ಚಿಕ್ಕಮಗಳೂರು: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು, ಹಂತಕರ ವಿರುದ್ಧ ಎನ್ಕೌಂಟರ್ ಅಸ್ತ್ರಕ್ಕೆ ಪರೋಕ್ಷವಾಗಿ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ಮುಂಬೈನಲ್ಲಿ ಪ್ರಯೋಗಿಸಿದ ದಂಡದ ಪ್ರಯೋಗವೀಗ ರಾಜ್ಯದಲ್ಲೂ ಆಗಬೇಕು. ಮುಂಬೈನಲ್ಲಿ ಭೂಗತ ಜಗತ್ತಿನ ಪಾತಕಿಗಳು ಎಲ್ಲೇ ಮೀರಿದಾಗ ಎನ್ಕೌಂಟರ್ ಕ್ರಮ ಕೈಗೊಳ್ಳಲಾಯಿತು. ಆಗ ಮುಂಬೈನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ರಾಜ್ಯದಲ್ಲಿ ಕೂಡ ಅಂತಹ ಕಠೋರವಾದ ಕ್ರಮಗಳನ್ನು ಕೈಗೊಂಡರೂ ತಪ್ಪಿಲ್ಲ ಎಂದು ಕಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ಮಂಗಳೂರು: ಪ್ರಾರ್ಥನಾ ಮಂದಿರ ಧ್ವಂಸ ಪ್ರಕರಣ, ಇಬ್ಬರ ಬಂಧನ
ಈಗಾಗಲೇ ಇಬ್ಬರು ಹಂತಕರ ಬಂಧನವಾಗಿದ್ದು ಉಳಿದವರ ಬಂಧನವಾಗಲಿದೆ ಎನ್ನುವ ವಿಶ್ವಾಸವಿದೆ. ರಾಷ್ಟ್ರೀಯ ಚಿಂತಕನ ಹತ್ಯೆ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಶಕ್ತಿ ಇದೆಯೋ ಎನ್ನುವುದರ ಬಗ್ಗೆ ತನಿಖೆ ಆಗಬೇಕು. ಹತ್ಯೆಯ ಹಿಂದೆ ಯಾವುದೋ ಸಂಘಟನೆ, ಶಕ್ತಿ ಇದ್ದರೂ ಅದನ್ನು ದಮನ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕು. ಹತ್ಯೆ ಹಿಂದೆ ಯಾರ್ಯಾರು ಇದ್ದಾರೆ, ಅವರಿಗೆ ಬೆಂಗಾವಲು ಯಾರು, ಹಣಕಾಸಿನ ನೆರವು ಯಾರು ನೀಡಿದ್ದಾರೋ ಅವರ ಬಂಧನವಾಗಬೇಕು ಎಂದು ಕಟೀಲ್ ಆಗ್ರಹಿಸಿದ್ದಾರೆ.