ಚಿಕ್ಕಮಗಳೂರು: ಒಂದು ಅಡಿ ಜಾಗಕ್ಕಾಗಿ ಕಾದಾಡುವ ಈ ಕಾಲದಲ್ಲಿ ಕಾಫಿನಾಡಿನ ನಿವಾಸಿಯೊಬ್ಬರು ಬರೋಬ್ಬರಿ ನಾಲ್ಕೂವರೆ ಎಕರೆ ಜಮೀನು ದಾನ ನೀಡುವ ಮೂಲಕ ಕೋಮು ಸೌಹಾರ್ದತೆಗೆ ಮಾದರಿಯಾಗಿದೆ.
ಹೌದು, ಕಾಫಿ ಕ್ಯೂರಿಂಗ್ ನಡೆಸುತ್ತಿರೋ ಮಹಮದ್ ನಾಸೀರ್ ಎಂಬುವರು ಗೋಶಾಲೆ, ಅನಾಥಾಶ್ರಮ, ವೃದ್ಧಾಶ್ರಮ, ಪಂಚಮುಖಿ ಆಂಜನೇಯ ದೇವಸ್ಥಾನ ನಿರ್ಮಿಸಲು ತಮ್ಮ ನಾಲ್ಕೂವರೆ ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಅದು ಅಂತಿಂಥ ಜಾಗವಲ್ಲ. ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 173 ರ ರಸ್ತೆ ಪಕ್ಕದ ಜಾಗ. ಈ ಜಾಗಕ್ಕೆ ವಜ್ರದ ಬೆಲೆ ಇದ್ದು, ಹತ್ತಿರ-ಹತ್ತಿರ ಎರಡು ಕೋಟಿಗೂ ಅಧಿಕ. ಇಂತಹ ಜಾಗವನ್ನು ಚಿಕ್ಕಮಗಳೂರಿನ ಸ್ವಾಮಿ ಸಮರ್ಥ ರಾಮದಾಸ್ ಟ್ರಸ್ಟ್ಗೆ ಮಹಮದ್ ನಾಸೀರ್ ದಾನ ನೀಡಿ ಸೌಹಾರ್ದತೆ ಮೆರೆದಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಶಾಲೆಗೆ ಎರಡೂವರೆ ಎಕರೆ ಭೂಮಿ ದಾನ ಮಾಡಿದ ಮುಸ್ಲಿಂ ಕುಟುಂಬ
ತಾಯಿಗೆ ಜೀವ ಜಲವಾಗಿದ್ದ ಗೋಮೂತ್ರ.. 'ಈ ಜಾಗವನ್ನು ಟ್ರಸ್ಟ್ಗೆ ನೀಡಿದ್ದೇನೆ. ಅವರು ಒಳ್ಳೆಯ ಕೆಲಸಕ್ಕೆ ಹೇಗೆ ಬೇಕಾದರೂ ಬಳಸಿಕೊಳ್ಳಲಿ. ತಾಯಿಯ ಋಣ ತೀರಿಸಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ಗೋವಿನ ಋಣ ತೀರಿಸಲು ಸಹ ಸಾಧ್ಯವಿಲ್ಲ. ತಾಯಿಯ ಋಣ ತೀರಿಸಲು ಪ್ರಯತ್ನಿಸಿದೆವು. ಆದ್ರೆ ಆಗಲಿಲ್ಲ. ನಮ್ಮ ತಾಯಿ ಕ್ಯಾನ್ಸರ್ನಿಂದ ಬಳಲುವಾಗ ಗೋವಿನ ಮೂತ್ರ ಕುಡಿದು ಚೆನ್ನಾಗಿದ್ರು. ಹಾಗಾಗಿ, ನಮಗೆ ಗೋವಿನ ಋಣ ತೀರಿಸುವುದು ಬಾಕಿ ಇದೆ. ಗೋವಿನ ಋಣವನ್ನೂ ತೀರಿಸಲು ಸಾಧ್ಯವಿಲ್ಲ. ಆದ್ರೆ, ತಕ್ಕ ಮಟ್ಟಿಗೆ ಕೈಲಾದ ಸಹಾಯ ಮಾಡಿ, ಈ ನಾಲ್ಕೂವರೆ ಎಕರೆ ಜಾಗವನ್ನು ಗೋಶಾಲೆ ನಿರ್ಮಿಸಲು ಟ್ರಸ್ಟ್ಗೆ ನೀಡಿದ್ದೇನೆ. ಗೋವುಗಳ ಉಳುವಿಗಾಗಿ ಯಾವುದೇ ಕೆಲಸಕ್ಕೂ ಸಿದ್ಧ' ಅಂತಾರೆ ನಾಸೀರ್.
ಇದನ್ನೂ ಓದಿ: ದುರ್ಗಾ ದೇವಿ ನಿಮಜ್ಜನ ವೇಳೆ ಹಠಾತ್ ಪ್ರವಾಹ.. ನದಿ ನೀರಲ್ಲಿ ಕೊಚ್ಚಿಹೋದ 7 ಮಂದಿ
ಆಂಜನೇಯ ದೇವಸ್ಥಾನಕ್ಕೂ ಜಾಗ.. ಈಗಾಗಲೇ ಈ ಜಾಗದಲ್ಲಿ ಪಂಚಮುಖಿ ಆಂಜನೇಯ ನಿರ್ಮಾಣಕ್ಕೆ ಪೂಜೆ ಕೂಡ ನಡೆದಿದ್ದು, ಆಂಜನೇಯ ಮೂರ್ತಿ ನೆಲೆ ನಿಲ್ಲಲಿದೆ. ಇಲ್ಲಿ ಆಂಜನೇಯನ ಮೂರ್ತಿ ನಿರ್ಮಿಸಬೇಕೆಂಬುದು ನಸೀರ್ ಆಸೆ ಕೂಡ ಆಗಿದೆ. ಆಂಜನೇಯ ನಿಷ್ಠೆಯಿಂದ ರಾಮನ ಸೇವೆ ಮಾಡಿದವನು. ಹಾಗಾಗಿ, ಆಂಜನೇಯನ ಮೂರ್ತಿ ನಿರ್ಮಿಸುತ್ತಿದ್ದೇವೆ ಎಂದು ಮಠದ ಟ್ರಸ್ಟಿ ಸಂತೋಷ್ ಗುರೂಜಿ ಹೇಳಿದ್ದಾರೆ.
ನಾಸೀರ್ ಅವರ ಈ ಕಾರ್ಯಕ್ಕೆ ಸ್ಥಳೀಯರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮನಸ್ಸಿನಲ್ಲಿನ ರಾವಣನನ್ನು ಕೊಂದರೆ ಪ್ರತಿಯೊಬ್ಬರು ರಾಮನ ಅಭಿವ್ಯಕ್ತಿ ವ್ಯಕ್ತಿತ್ವದವರಾಗಬಹುದು. ನಾಸೀರ್ ಸಮಾಜಕ್ಕೆ ಮಾದರಿ ವ್ಯಕ್ತಿ ಎಂದು ಟ್ರಸ್ಟಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಾಲ್ಯದಲ್ಲೇ ಇಹಲೋಕ ತ್ಯಜಿಸಿದ ಪುತ್ರ: ಜೀವನ್ ನೆನಪಿಗಾಗಿ ಬಡವರಿಗೆ ನಿವೇಶನ ಹಂಚಿಕೆ
ಈಗಾಗಲೇ ಜಾಗ ಟ್ರಸ್ಟ್ ಹೆಸರಿಗೆ ನೋಂದಣಿಯಾಗಿದ್ದು, ಶೀಘ್ರದಲ್ಲೇ ಇಲ್ಲಿ ಅನಾಥಾಶ್ರಮ, ವೃದ್ಧಾಶ್ರಮ, ಗುರುಕುಲ, ಆಂಜನೇಯ ಮೂರ್ತಿ ಹಾಗೂ ಗೋಶಾಲೆ ಆರಂಭಗೊಳ್ಳಲಿದೆ. ಹಿಂದೂ-ಮುಸ್ಲಿಂ ಅಂತ ಭೇದ ಮಾಡುವವರ ನಡುವೆ ನಾಸೀರ್ ಅವರ ಈ ಕಾರ್ಯ ಎರಡು ಸಾಮರಸ್ಯ ಮೂಡಲು ಸಹಕಾರಿ ಆಗಿದೆ.