ಚಿಕ್ಕಮಗಳೂರು : ಇಲ್ಲಿ ಕಸ ಹಾಕಿದ್ರೆ ಶನಿದೇವ್ರು ನಿಮ್ಮ ಹೆಗಲೇರುತ್ತಾನೆ. ನೀವು ಕೈ-ಕಾಲು ಕಳೆದುಕೊಂಡು ಭಿಕ್ಷುಕರಾಗುತ್ತೀರಿ. ಕನಸಲ್ಲಿ ದೆವ್ವ ಬಂದು ನಿಮ್ಮನ್ನ ಕಾಡುತ್ತೆ. ನಿಮ್ಮ ಕೆಟ್ಟ ಘಳಿಗೆ ಶುರುವಾಗುತ್ತೆ. ಹೀಗಂತಾ, ಚಿಕ್ಕಮಗಳೂರಿನ ನಗರಸಭೆ ನಗರ ನಿವಾಸಿಗಳಿಗೆ ಭಯದ ಮೂಲಕ ಎಚ್ಚರಿಕೆ ನೀಡುತ್ತಿದೆ.
ನಗರವನ್ನ ಕಸ ಮುಕ್ತವಾಗಿ ಮಾಡಬೇಕೆಂದು ನಗರಸಭೆ ಹೋರಾಡ್ತಿದೆ. 25 ಆಟೋ 12 ಗಂಟೆಗಳ ಕಾಲ ಇಡೀ ನಗರದಲ್ಲಿ ಸುತ್ತಿ ಕಸ ಸಂಗ್ರಹಿಸುತ್ತಿವೆ. ಆದರೂ, ಜನ ಬೀದಿಯಲ್ಲಿ ಒಂದೊಂದು ಕಸದ ಪಾಯಿಂಟ್ ಮಾಡ್ಕೊಂಡಿರೋದ್ರಿಂದ ನಗರಸಭೆ ನಗರ ನಿವಾಸಿಗಳಿಗೆ ವಿಭಿನ್ನವಾಗಿ ಶಾಪದ ಮೂಲಕ ಭಯ ಹುಟ್ಟಿಸುತ್ತಿದೆ.
ನಗರದ ಬೀದಿ-ಬೀದಿಯಲ್ಲಿ ಸಿಬ್ಬಂದಿ ಜೊತೆ ಗೋಡೆಗಳ ಮೇಲೆ, ಲೈಟ್ ಕಂಬಗಳ ಮೇಲೆ ನಗರಸಭೆ ಆಯುಕ್ತ ಬಸವರಾಜ್ ಬೋರ್ಡ್ ಹಾಕಿ ಜಾಗೃತಿ ಮೂಡಿಸುತ್ತಿದ್ದಾರೆ. ಇಲ್ಲಿ ಕಸ ಹಾಕಿದ್ರೆ ಶನಿ ಕಾಟ ಆರಂಭವಾಗುತ್ತೆ. ಭಿಕ್ಷುಕರಾಗುತ್ತೀರಿ, ದೆವ್ವ ಬರುತ್ತೆ ಎಂಬ ಬೋರ್ಡ್‍ಗಳನ್ನ ಇಟ್ಕೊಂಡು ಬೀದಿ-ಬೀದಿ ಅಲೆಯುತ್ತಿದ್ದಾರೆ.
ಕಾರಣ ಇಷ್ಟೇ, ನಗರದಲ್ಲಿ 25 ಆಟೋ ದಿನಕ್ಕೆ 12 ಗಂಟೆಗಳ ಕಾಲ ಓಡಾಡಿ ಮನೆ ಬಾಗಿಲಲ್ಲಿ ಕಸ ಸಂಗ್ರಹಿಸುತ್ತೆ. ಆದರೆ, ಬೆಳಗ್ಗೆಯೇ ಎದ್ದು ಕಸದ ಗಾಡಿಗೆ ಕಸ ಹಾಕದ ಸೋಂಬೇರಿಗಳು ಬೇಕಾದಾಗ ಎಲ್ಲೆಂದರಲ್ಲಿ ಕಸ ಸುರಿದು ಹೋಗುತ್ತಿದ್ದಾರೆ. ಇದನ್ನ ನಿಯಂತ್ರಿಸಲು ನಗರಸಭೆ ಈ ಮಾಸ್ಟರ್ ಪ್ಲ್ಯಾನ್ ಮಾಡಿದೆ.
ಜನರೇ ಮಾಡಿಕೊಂಡಿರುವ 150 ಕಸದ ಪಾಯಿಂಟ್‍ಗಳ ಜೊತೆಗೆ ನಗರದ 35 ವಾರ್ಡ್‍ಗಳಲ್ಲೂ ಎಲ್ಲೆಂದರಲ್ಲಿ ಕಸ ಹಾಕುವ ಜಾಗದಲ್ಲಿ ಈ ರೀತಿ ಬೋರ್ಡ್‍ಗಳನ್ನ ಹಾಕಿದ್ದಾರೆ. ಹೀಗಾದ್ರು ಜನ ಬುದ್ಧಿ ಕಲಿತು ನಗರವನ್ನ ಶುಚಿಯಾಗಿ ಇಟ್ಟುಕೊಳ್ತಾರಾ? ಎಂದು ನಗರದಾದ್ಯಂತ ಬೋರ್ಡ್‍ಗಳನ್ನ ಹಾಕಿರೋ ನಗರಸಭೆ ಆಯುಕ್ತರು, ದಯವಿಟ್ಟು ಎಲ್ಲೆಂದರಲ್ಲಿ ಕಸ ಹಾಕಬೇಡಿ. ನಿಮ್ಮಗಳ ಆರೋಗ್ಯವೇ ಹಾಳಾಗೋದು. ಜೊತೆಗೆ, ನಗರದ ಸೌಂದರ್ಯ ಕೂಡ ಹಾಳಾಗುತ್ತೆ. ಶಾಪದಿಂದ ಮುಕ್ತರಾಗಿ ಎಂದು ಮನವಿ ಮಾಡಿದ್ದಾರೆ.
ಅಧಿಕಾರಿಗಳು ಮನೆ-ಮನೆಗೆ ಹೋಗಿ ಕಸವನ್ನ ಕಸದ ಗಾಡಿಯಲ್ಲೇ ಹಾಕಿ ಎಂದು ಮನವಿ ಮಾಡಿದ್ದೂ ಆಯ್ತು. ಕರ ಪತ್ರಗಳನ್ನ ಹಂಚಿ ಆ ಮೂಲಕ ತಿಳಿ ಹೇಳಿದ್ದೂ ಆಯ್ತು. ಆಟೋಗಳಲ್ಲಿ ಅನೌನ್ಸ್ ಮಾಡಿಸಿದ್ದೂ ಆಯ್ತು. ಆದ್ರೆ, ಜನ ಮಾತ್ರ ಬುದ್ಧಿ ಕಲಿಯಲಿಲ್ಲ. ಬೈಕ್-ಆಟೋ-ಕಾರುಗಳಲ್ಲಿ ಹೋಗ್ತಾ-ಬರ್ತಾ ಎಲ್ಲೆಂದರಲ್ಲಿ ಕಸದ ಕವರ್ ಎಸೆದು ಹೋಗುತ್ತಿದ್ದರು. ಹಾಗಾಗಿ, ನಗರಸಭೆ ಕೊನೆ ಪ್ರಯತ್ನ ಎಂದು ದೇವರು-ದೆವ್ವದ ಮೂಲಕ ಜನರಲ್ಲಿ ಭಯ ತುಂಬಿ ಎಲ್ಲೆಂದರಲ್ಲಿ ಕಸ ಎಸೆಯದಂತೆ ಎಚ್ಚರಿಸಿದ್ದಾರೆ.
ದೇವರ ಫೋಟೋಗಳ ಬಳಿ ರಂಗೋಲಿಯನ್ನ ಹಾಕಿಸಿ ಕಸ ಹಾಕದಂತೆ ಮನವಿ ಮಾಡಿದ್ದಾರೆ. ಇದು ಕೊನೆಯ ಪ್ರಯತ್ನ. ಜನ ಇನ್ನೂ ಎಲ್ಲೆಂದರಲ್ಲಿ ಕಸ ಹಾಕಿದರೆ. ನಗರಸಭೆ ತಂಡಗಳನ್ನ ಮಾಡಿದೆ. ಯಾರಾದರೂ ಎಲ್ಲೆಂದರಲ್ಲಿ ಕಸ ಹಾಕುವುದು ಕಣ್ಣಿಗೆ ಬಿದ್ದರೆ, ಮುಲಾಜಿಲ್ಲದೆ ಅವರ ಮನೆಗೆ ನೀಡುರುವ ಮೂಲಸೌಲಭ್ಯಗಳನ್ನ ಕಿತ್ತು ಹಾಕುತ್ತೇವೆ ಎಂದು ಎಚ್ಚರಿಸಿದ್ದಾರೆ.
ಓದಿ: ದೆಹಲಿಯಲ್ಲಿ ಸುಧಾರಿತ ಸ್ಫೋಟಕ ವಸ್ತು ಪತ್ತೆ; ನಿಷ್ಕ್ರಿಯಗೊಳಿಸಿ ಅನಾಹುತ ತಪ್ಪಿಸಿದ ಎನ್‌ಎಸ್‌ಜಿ