ಚಿಕ್ಕಮಗಳೂರು: ಇಲ್ಲಿನ ನಗರಸಭೆಯ ಓರ್ವ ಸಿಬ್ಬಂದಿ ಮತ್ತು ಬ್ರೋಕರ್ ಸೇರಿ ನಗರಸಭೆಗೆ ಸೇರಬೇಕಾದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ನಗರಸಭೆಯ ನೀರು, ಕಂದಾಯ ಮುಂತಾದ ಬಿಲ್ಗಳನ್ನು ಕಟ್ಟುವುದಾಗಿ ಜನರಿಂದ ಪಡೆದ ಹಣವನ್ನು ನಗರಸಭೆಗೆ ಜಮೆ ಮಾಡದೆ ವಂಚನೆ ಮಾಡಲಾಗಿದೆ ಎನ್ನಲಾಗಿದೆ. ಜನರಿಂದ ಬಿಲ್ ಹಾಗೂ ಹಣ ಪಡೆದು ಅವರಿಗೆ ಬ್ಯಾಂಕ್ ಸೀಲ್ ಇರುವ ರಶೀದಿಗಳನ್ನು ನಗರಸಭೆಯ ಓರ್ವ ಸಿಬ್ಬಂದಿ ನೀಡುತ್ತಿದ್ದರು. ಆದರೆ ಹಣ ಮಾತ್ರ ನಗರಸಭೆ ಅಕೌಂಟಿಗೆ ಜಮೆಯಾಗುತ್ತಿರಲಿಲ್ಲ. ಸಿಬ್ಬಂದಿಯ ಈ ಅಕ್ರಮಕ್ಕೆ ಬ್ರೋಕರ್ ಒಬ್ಬರು ಸಹ ಜೊತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬ್ಯಾಂಕಿನಲ್ಲಿ ನಗರಸಭೆಗೆ ಸಂಬಂಧಿಸಿದ ಚಲನ್ಗಳು ತಾಳೆಯಾಗದಿದ್ದಾಗ ಬ್ಯಾಂಕ್ ಸಿಬ್ಬಂದಿಯು ನಗರಸಭೆಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು. ಪ್ರಕರಣದ ಹಿನ್ನೆಲೆ ಪರಿಶೀಲಿಸಿದಾಗ ಹಣದ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು, ನಗರಸಭೆ ಅಧಿಕಾರಿಗಳು ಈಗ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ಓದಿ: ಐಎಂಎ ವಂಚನೆ ಪ್ರಕರಣ: ಐಪಿಎಸ್ಅಧಿಕಾರಿ ಹೇಮಂತ್ ನಿಂಬಾಳ್ಕರ್ಗೆ ಬಿಗ್ ರಿಲೀಫ್
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಶ್ಯಾಮ್ ಹಾಗೂ ಕೇಶವ್ ಎಂಬುವವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಈ ಮಧ್ಯೆ ಪೊಲೀಸರ ತನಿಖೆಯೊಂದಿಗೆ ನುರಿತ ಆಡಿಟರ್ ನೇತೃತ್ವದಲ್ಲಿ ಪರಿಶೀಲನೆ ನಡೆಸಿದರೆ ಮಾತ್ರ ಸಮಗ್ರ ಚಿತ್ರಣ ಸಿಗಲಿದೆ ಎಂದು ಕೆಲವರು ಆಗ್ರಹಿಸಿದ್ದಾರೆ. ಪ್ರಕರಣದಲ್ಲಿ ಸುಮಾರು 25-30 ಲಕ್ಷ ರೂ. ಹಣ ದುರುಪಯೋಗವಾಗಿದೆ ಎಂದು ನಗರಸಭೆಯ ಕೆಲ ಮಾಜಿ ಸದಸ್ಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಬ್ಯಾಂಕ್ ಮೊಹರನ್ನೇ ನಕಲು ಮಾಡಿ ರಶೀದಿ ತಯಾರಿಸಿರುವ ಗುಮಾನಿ ಇದ್ದು, ಪೊಲೀಸರು ಈ ಪ್ರಕರಣವನ್ನು ಆಳವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಜನ ಆಗ್ರಹಿಸುತ್ತಿದ್ದಾರೆ.