ಚಿಕ್ಕಮಗಳೂರು: ಗದ್ದೆ ಕೆಲಸಕ್ಕೆ ಜನ ಸಿಗುವುದಿಲ್ಲ, ಪ್ರಾಣಿಗಳ ಕಾಟದಿಂದ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಂದ ಫಸಲಿಗೆ ಉತ್ತಮ ಬೆಲೆ ಇಲ್ಲ. ತೋಟಗಾರಿಕೆ ಕೃಷಿಯಲ್ಲಿ ಹೆಚ್ಚು ಲಾಭ ಸಿಗುತ್ತದೆ. ಹೀಗೆ ಇತ್ಯಾದಿ ಕಾರಣಗಳಿಂದ ಗದ್ದೆಗಳನ್ನು ಪಾಳು ಬಿಡುವುದು ಒಂದೆಡೆಯಾದರೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸುಮಾರು 500ಕ್ಕೂ ಹೆಚ್ಚು ಜನರು ಸಾಮೂಹಿಕವಾಗಿ ಸೇರಿ ಗದ್ದೆಯಲ್ಲಿ ಭತ್ತ ನಾಟಿ ಮಾಡಿದ ಅಪರೂಪದ ಸನ್ನಿವೇಶ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಐತಿಹಾಸಿಕ ಹಿನ್ನೆಲೆ ಇರುವ ಹೊರನಾಡು ಗ್ರಾಮದ ದೊಡ್ಮನೆ ರಾಜೇಂದ್ರ ಪ್ರಸಾದ್ ಹೆಗ್ಗಡೆ ಅವರ ಗದ್ದೆಯಲ್ಲಿ ಭಾನುವಾರ 500ಕ್ಕೂ ಹೆಚ್ಚು ಜನರು ಗದ್ದೆಯಲ್ಲಿ ಭತ್ತ ನಾಟಿ ಮಾಡುವ ದೃಶ್ಯ ಕಂಡುಬಂತು. ರಾಜೇಂದ್ರ ಪ್ರಸಾದ್ ತಮ್ಮ ಗದ್ದೆಯಲ್ಲಿ ಭತ್ತ ನಾಟಿ ಮಾಡುವ ದಿನ ಗೊತ್ತುಪಡಿಸಿದರೆ ಊರಿಗೆಲ್ಲ ದೊಡ್ಡ ಸುದ್ದಿಯಾಗುತ್ತದೆ. ಇವರ ಭತ್ತದ ಗದ್ದೆಯಲ್ಲಿ ನಾಟಿ ಮಾಡಲೆಂದೆ, ಜಿಲ್ಲೆಯ ವಿವಿಧ ಭಾಗದಿಂದ ಜನರು ಹೊರನಾಡಿಗೆ ಆಗಮಿಸುತ್ತಾರೆ. ಕಳಸ ಸೇರಿದಂತೆ ಮೂಡಿಗೆರೆ, ಬೇಲೂರು, ಜೈಪುರ, ಬಸರಿಕಟ್ಟೆ, ಕೊಪ್ಪ, ಶೃಂಗೇರಿ, ಬಲಿಗೆ ಭಾಗಗಳಿಂದ ತಂಡೋಪತಂಡವಾಗಿ ಮಹಿಳೆಯರು ಹಾಗೂ ಪುರುಷರು ಒಟ್ಟೊಟ್ಟಿಗೆ ಬಂದು ಭತ್ತದ ಗದ್ದೆಯ ನಾಟಿಯಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ ಮಕ್ಕಳು ಕೂಡ ಭಾಗವಹಿಸುವುದು ವಿಶೇಷವಾಗಿದೆ.
ಈ ಗದ್ದೆಗೆ ಐತಿಹಾಸಿಕ ಹಿನ್ನೆಲೆ ಇರುವುದರಿಂದ ದೊಡ್ಮನೆಯಲ್ಲಿ ಕೆಲವು ಪೂಜಾ ಸಂಪ್ರದಾಯಗಳು ನೆರವೇರಿದ ಬಳಿಕ, ಪ್ರತಿಯೊಬ್ಬರು ಗದ್ದೆಗೆ ಇಳಿಯುತ್ತಾರೆ. ಗದ್ದೆಯನ್ನು ಹದ ಮಾಡಲು ವಿಶೇಷವಾಗಿ ಕೋಣ ಹಾಗೂ ಎತ್ತುಗಳನ್ನು ಬಳಸಲಾಗುತ್ತದೆ. ಗದ್ದೆಯಲ್ಲಿ ಭತ್ತ ನಾಟಿ ಮಾಡಲು ಬರುವ ಜನರು ಮಾಡಿದ ಕೆಲಸಕ್ಕೆ ಯಾವುದೇ ರೀತಿಯ ಸಂಭಾವನೆಯನ್ನು ಪಡೆಯುವುದಿಲ್ಲ. ಮಹಿಳೆಯರು ಹಾಗೂ ಮಕ್ಕಳು ಈ ಗದ್ದೆ ನಾಟಿಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಾರೆ.
ಗದ್ದೆಯಲ್ಲಿ ಕೃಷಿ ಹಬ್ಬದ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ತಂಡೋಪತಂಡವಾಗಿ ಬಂದ ಕೃಷಿಕರು ಗದ್ದೆಗಿಳಿದು ನಾಟಿ ಮಾಡುವುದನ್ನು ನೋಡುವುದೇ ಆನಂದ. ಮಹಿಳೆಯರು ಹಾಡು, ಕಥೆಗಳನ್ನು ಹೇಳುತ್ತ ಗದ್ದೆ ನಾಟಿ ಮಾಡುವುದು ಕಂಡು ಬಂದರೆ, ಪುರುಷರು ಮಾತನಾಡುತ್ತ, ಮಕ್ಕಳು ಕೆಸರಿನಲ್ಲಿ ಎದ್ದೂಬಿದ್ದು ಆಟವಾಡುತ್ತಿದ್ದರು. ಗದ್ದೆ ಮಾಲೀಕ ರಾಜೇಂದ್ರ ಪ್ರಸಾದ್ ಹೆಗ್ಗಡೆ ಅವರು ಪ್ರತಿಯೊಬ್ಬರನ್ನೂ ಮಾತನಾಡಿಸಿ ಯೋಗಕ್ಷೇಮ ಸಮಚಾರ ವಿಚಾರಿಸುತ್ತಿರುವುದು ಕಂಡುಬಂತು. ಭತ್ತ ನಾಟಿಗೆ ಬಂದಂಥ ಜನರಿಗೆ ದೊಡ್ಮನೆಯಲ್ಲಿ ಊಟೋಪಚಾರ ನೀಡಿ ಕಳುಹಿಸಿ ಕೊಡಲಾಗುತ್ತದೆ.
ಈ ಗದ್ದೆ ನಾಟಿಗೆ ಕೆಲವರು ಸಾಕಷ್ಟು ವರ್ಷಗಳಿಂದ ದೂರದ ಊರಿನಿಂದ ಬಂದು ಭತ್ತ ನಾಟಿ ಮಾಡುತ್ತಾರೆ. ಭತ್ತ ನಾಟಿ ಮಾಡಲು ಆಗದ ಕೆಲ ವೃದ್ಧರು ಕೆಸರು ಗದ್ದೆಗಿಳಿದು ಎರಡು ಸಸಿಗಳನ್ನು ನೆಡುತ್ತಾರೆ. ದೊಡ್ಮನೆ ಅವರ ಗದ್ದೆಯಲ್ಲಿ ನಾಟಿ ಮಾಡುವುದು ಒಂದು ಪುಣ್ಯದ ಕೆಲಸ ಎಂದು ಈ ಭಾಗದ ಜನರು ಭಾವಿಸಿದ್ದಾರೆ. ಕೆಲವರಂತೂ ಹಲವು ವರ್ಷಗಳಿಂದ ಈ ರೀತಿಯ ಸೇವೆ ಮಾಡಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ಇದನ್ನೂ ಓದಿ: Wild Elephants: ಕಾಫಿನಾಡಲ್ಲಿ ಕಾಡಾನೆಗಳ ಉಪಟಳ; ಒಂದೂವರೆ ಎಕರೆಯಲ್ಲಿದ್ದ ಕೃಷಿ ನಾಶ