ಚಿಕ್ಕಮಗಳೂರು: ಇಡೀ ಮಲೆನಾಡನ್ನೇ ಬೆಚ್ಚಿಬೀಳಿಸಿದ್ದ ಮಂಗನ ಕಾಯಿಲೆ ಈಗ ಮತ್ತೆ ಚಿಕ್ಕಮಗಳೂರಿಗೆ ಕಾಲಿಟ್ಟಿದೆ. ಜಿಲ್ಲೆಯಲ್ಲಿ ಮತ್ತೆ ಕೆಎಫ್ಡಿ ವೈರಸ್ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಶಾಂತಿ ಗ್ರಾಮದಲ್ಲಿ ಈ ವೈರಸ್ ಪತ್ತೆಯಾಗಿದ್ದು, ಸತ್ತ ಮಂಗನ ಕಳೇಬರದ ಉಣ್ಣೆಯಲ್ಲಿ ಪಾಸಿಟಿವ್ ಅಂಶ ಇದೆ ಎಂದು ಶಿವಮೊಗ್ಗ ಪ್ರಯೋಗಾಲಯದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಜಿಲ್ಲೆಯಲ್ಲಿ 35 ಮಂಗಗಳು ಸಾವನ್ನಪ್ಪಿದವು. ಅದರಲ್ಲಿ 18 ಮಂಗಗಳ ಅಂಗಾಂಗ ಪರೀಕ್ಷೆ ನಡೆಸಲಾಗಿದ್ದು, ಒಂದು ಮಂಗದ ದೇಹದಲ್ಲಿ ಪಾಸಿಟಿವ್ ವೈರಸ್ ಅಂಶ ಪತ್ತೆಯಾಗಿದೆ.
ಈ ಕುರಿತು ಆರೋಗ್ಯ ಇಲಾಖೆ ಮುಂಜಾಗ್ರತ ಕ್ರಮ ಕೈಗೊಂಡಿದ್ದು, ತರಿಕೇರೆ, ಮೂಡಿಗೆರೆ, ಕೊಪ್ಪ ತಾಲೂಕಿನ ಹಲವು ಗ್ರಾಮಗಳಲ್ಲಿ ಜನರಿಗೆ ಜೌಷಧಿ ನೀಡಲಾಗಿದೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.