ಚಿಕ್ಕಮಗಳೂರು: ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು ಮೂಲದ ವ್ಯಕ್ತಿಯಲ್ಲಿ ಕೆಎಫ್‌ಡಿ ಪತ್ತೆಯಾಗಿದೆ. ಇದರಿಂದಾಗಿ ಮಲೆನಾಡಿನಲ್ಲಿ ಮತ್ತೆ ಮಂಗನ ಕಾಯಿಲೆ ಭೀತಿ ಆವರಿಸಿದೆ. ಮಲೆನಾಡಲ್ಲಿ ಈ ವರ್ಷದ ಮೊದಲ ಕೆಎಫ್‌ಡಿ, ಮಂಗನಕಾಯಿಲೆ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ. ಕೊಪ್ಪದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ.
ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆ ಅರೋಗ್ಯ ಇಲಾಖೆ ಟಿಕ್ಸ್ ಕಳುಹಿಸಿತ್ತು. ಇದೀಗ ವ್ಯಕ್ತಿಯಲ್ಲಿ ಕೆಎಫ್‌ಡಿ ಇರುವುದು ದೃಢಪಟ್ಟಿದೆ. ಇದು ಈ ವರ್ಷದ ಮೊದಲ ಕೆಎಫ್‌ಡಿ ಪ್ರಕರಣವಾಗಿದೆ. ಹೀಗಾಗಿ ಮಲೆನಾಡಿನಲ್ಲಿ ಮತ್ತೆ ಮಂಗನ ಕಾಯಿಲೆ ಭೀತಿ ಆವರಿಸಿದೆ. ಕೆಎಫ್‌ಡಿ ಪತ್ತೆಯಾದ ವ್ಯಕ್ತಿ ಇದ್ದ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶದ ಪ್ರತಿ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಲಾಗಿದೆ. ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲೂ ಕೆಎಫ್‌ಡಿ ಭೀತಿ ಆವರಿಸಿದೆ. ಜನರು ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆ ತಿಳಿಸಿದೆ.
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದೊಂದು ಗಂಟೆಯಿಂದ ಧಾರಾಕಾರ ಅಕಾಲಿಕ ಮಳೆಯಾಗಿದ್ದು, ಮಳೆಯಿಂದಾಗಿ ಜನರು ಕಂಗಾಲಾಗಿದ್ದಾರೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್, ಮತ್ತಿಕಟ್ಟೆ, ನಿಡುವಾಳೆ, ಗುತ್ತಿ, ಭೈರಾಪುರ, ಕುಂದೂರು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಮಳೆ ಅಬ್ಬರಿಸಿದೆ.
ಜನವರಿಯಲ್ಲಿ ಬಂದ ಮಳೆ ಕಂಡು ಮಲೆನಾಡಿಗರು ಕಂಗಾಲಾಗಿದ್ದಾರೆ. ಈ ಮಳೆಯಿಂದ ಭತ್ತ, ಅಡಿಕೆ, ಕಾಫಿ, ಮೆಣಸು ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದ್ದು, ರೈತರು, ಕೂಲಿ ಕಾರ್ಮಿಕರು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. 2022 ರಲ್ಲೂ ವರ್ಷ ಪೂರ್ತಿ ಮಳೆ ಸುರಿದಿತ್ತು. ಈ ವರ್ಷವೂ ಜನವರಿಯಲ್ಲೇ ಮಳೆ ಕಂಡು ಭವಿಷ್ಯದ ಬಗ್ಗೆ ಬೆಳೆಗಾರರು ಕಂಗಾಲಾಗಿದ್ದಾರೆ. ಅಳಿದುಳಿದ ಬೆಳೆಯನ್ನೂ ಉಳಿಸಿಕೊಳ್ಳಲಾಗದೆ ರೈತರು ಚಿಂತಾಕ್ರಾಂತರಾಗಿದ್ದಾರೆ.
ಅನೇಕ ಕಡೆ ಧಾರಾಕಾರ ಮಳೆ: ಇಂದು ಬೆಳಗ್ಗೆಯಿಂದ ಮಲೆನಾಡಿನ ಬಹುತೇಕ ಕಡೆ ಮೋಡಕವಿದ ವಾತಾವರಣ ಸೃಷ್ಟಿಯಾಗಿದ್ದು, ಅನೇಕ ಕಡೆ ಧಾರಾಕಾರ ಮಳೆ ಸುರಿದಿದೆ. ಅಕಾಲಿಕವಾಗಿ ಬದಲಾದ ವಾತಾವರಣ ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ. ಈಗ ಬಹುತೇಕ ಕಡೆ ಕಾಫಿ ಕೊಯ್ಲು, ಅಡಿಕೆ ಕೊಯ್ಲು, ಭತ್ತದ ಕಟಾವು ಕೆಲಸ ನಡೆಯುತ್ತಿದೆ. ಫಸಲನ್ನು ಕೊಯ್ದು ರೈತರು ಕಣದಲ್ಲಿ ಹರಡಿದ್ದಾರೆ. ಈಗ ಮಳೆ ಬಂದರೆ ಕಣದಲ್ಲಿ ಇರುವ ಕಾಫಿ ಹಾಳಾಗುವುದರ ಜೊತೆಗೆ ತೋಟದಲ್ಲಿ ಕೊಯ್ಲು ಮಾಡಲು ಬಾಕಿಯಿರುವ ರಸ ಭರಿತವಾಗಿ ಹಣ್ಣಾಗಿರುವ ಕಾಫಿ ನೆಲ ಸೇರುತ್ತದೆ.
ಈಗ ಮಳೆ ಆಗುವುದರಿಂದ ಕಾಫಿ ಅಕಾಲಿಕವಾಗಿ ಹೂ ಆಗುತ್ತದೆ. ಇದರಿಂದ ಮುಂದಿನ ವರ್ಷದ ಫಸಲಿನ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಭೂಮಿಯ ತೇವಾಂಶ ಹೆಚ್ಚಾಗಿ ಮುಂದಿನ ಫಸಲಿನ ಹೂವು ಅರಳುವ ಪ್ರಮಾಣವೂ ಕಡಿಮೆಯಾಗುತ್ತದೆ. ಹಾಗೆಯೇ ಅನೇಕ ಕಡೆ ಅಡಿಕೆ ಕೊಯ್ಲು ಬಾಕಿ ಇದೆ. ಕೊಯ್ಲು ಮಾಡಿ ಒಣಗಿಸಲು ಹಾಕಿರುವ ಅಡಿಕೆ ಮಳೆಯಿಂದಾಗಿ ಹಾಳಾಗುತ್ತದೆ. ಸಾಕಷ್ಟು ರೈತರು ಭತ್ತದ ಕೊಯ್ಲು ಮಾಡಿ ಪೈರನ್ನು ಕಣದಲ್ಲಿ ಒಟ್ಟು ಹಾಕಿದ್ದಾರೆ.
ದಕ್ಷಿಣ ಒಳನಾಡು ಪ್ರದೇಶದಲ್ಲಿ ಮೋಡಕವಿದ ವಾತಾವರಣ: ಒಟ್ಟಾರೆ ಅಕಾಲಿಕ ಮಳೆ ರೈತರನ್ನು ಕಂಗಾಲಾಗಿಸಿದೆ. ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ. ಈಗಿನ ಹವಮಾನ ಮುನ್ಸೂಚನೆಯ ಪ್ರಕಾರ, ಮುಂದಿನ 48 ಗಂಟೆಗಳಲ್ಲಿ ರಾಜ್ಯದ ದಕ್ಷಿಣ ಒಳನಾಡು ಪ್ರದೇಶದಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗಲಿದೆ. ತಾಪಮಾನ 4 ರಿಂದ 5 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆಯಾಗುವ ಸಂಭವವಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯುತ್ತದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಓದಿ : ಗಾಂಜಾ ಪ್ರಕರಣ.. ಪೊಲೀಸರ ನಡೆಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ನಿರ್ಧಾರ