ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಕಳೆದ ವಾರದ ಹಿಂದಷ್ಟೇ ಹೋಟೆಲ್‍ನಲ್ಲಿ ಮಕ್ಕಳಂತೆ ಟೀ ಕುಡಿದು ನೋಡುಗರಿಗೆ ಖುಷಿ ಪಡಿಸಿದ್ದ ಮಂಗ ಇಂದು ಅದೇ ಊರಿನ ಜನಕ್ಕೆ 20 ಗಂಟೆಗಳ ಕಾಲ ಸಿಕ್ಕಾಪಟ್ಟೆ ಕಾಟ ಕೊಟ್ಟಿದೆ.
ಈ ಕೋತಿ ಏಕಲವ್ಯ ವಸತಿ ಶಾಲೆಗೆ ಬಂದಿತ್ತು. ಈ ವೇಳೆ, ಆಟೋ ಚಾಲಕನೋರ್ವ ಕೋತಿಗೆ ಕಿರಿಕ್ ಮಾಡಿದ್ದಾನೆ. ಅಲ್ಲಿಗೆ ಕಥೆ ಮುಗೀತು. ಅವನನ್ನ ಹುಡುಕಿ, ಕಚ್ಚಿ ಅವನ ಆಟೋದ ಟಾಪ್ ಕಿತ್ತಾಕುವವರೆಗೂ ಕೋತಿಗೆ ಸಮಾಧಾನ ಆಗಲಿಲ್ಲ. ಕೋತಿಯ ಸಿಟ್ಟಿಗೆ ಬೆದರಿದ ಆಟೋ ಚಾಲಕ ಬೇರೆ ಆಟೋ, ಕಾರಿನಲ್ಲಿ ಕದ್ದು ಕುಳಿತಿದ್ದ. ಆಟೋ ಚಾಲಕನನ್ನ ಹುಡುಕಿಕೊಂಡು ಎರಡು ಕಿ.ಮೀ. ಹುಡುಕಿಕೊಂಡು ಬಂದಿತ್ತು ಈ ಮಂಗ. ಸಂಜೆಯಾಗುತ್ತಿದ್ದಂತೆ ದಾರಿಹೋಕರ ಮೇಲೂ ದಾಳಿಗೆ ಮುಂದಾಗಿತ್ತು.
ಇದನ್ನೂ ಓದಿ:ನೋಡಿ: ಹೋಟೆಲ್‌ಗೆ ಬಂದು ಟೀ ಕುಡಿದು ಹೋಗುವ ಕೋತಿ, ಲೋಟ ಟೇಬಲ್ ಮೇಲಿಟ್ಟು ಹೋಗುತ್ತಂತೆ!
ಹಾಗಾಗಿ ಅರಣ್ಯ ಇಲಾಖೆ ಮಂಗನ ಸೆರೆ ಹಿಡಿಯಲು ಮುಂದಾದರೂ ಕೋತಿಯು ಅಧಿಕಾರಿಗಳಿಗೂ ಆಟವಾಡಿಸಿದೆ. ಒಂದು ಮಂಗನನ್ನ ಹಿಡಿಯಲು ಅರವಳಿಕೆ ಮದ್ದಿನ ಜೊತೆ 25ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು, ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ 15 ಸದಸ್ಯರ ಜೊತೆ 20 ಜನ ಸ್ಥಳೀಯರು 20 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು. ಕೊನೆಗೂ ಕೋತಿ ಸಿಕ್ಕಿಬಿತ್ತು. ಇದರಿಂದ ಕೊಟ್ಟಿಗೆಹಾರದ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ಸೆರೆ ಹಿಡಿದ ಕೋತಿಯನ್ನ ಅರಣ್ಯಾಧಿಕಾರಿಗಳು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಆದರೆ, ಚಾರ್ಮಾಡಿ ಅರಣ್ಯದಿಂದಲೇ ಕೊಟ್ಟಿಗೆಹಾರಕ್ಕೆ ಬಂದಿದ್ದ ಕೋತಿ ಮತ್ತೆ ಇಲ್ಲಿಗೆ ಬರೋದಿಲ್ಲ ಅನ್ನೋದಕ್ಕೆ ಗ್ಯಾರಂಟಿ ಏನು? ಮತ್ತೆ ಬಂದು ದಾಳಿ ಮಾಡಿದರೆ ಜವಾಬ್ದಾರಿ ಯಾರೆಂದು ಸ್ಥಳೀಯರು ಪ್ರಶ್ನಿಸಿದ್ದಾರೆ.