ಚಿಕ್ಕಮಗಳೂರು : ನಾನು ವಿರೋಧ ಪಕ್ಷದ ಶಾಸಕ ಎನ್ನುವ ಕಾರಣಕ್ಕೆ ಬಿಜೆಪಿ ರಾಜ್ಯ ಸರ್ಕಾರ ಅನುದಾನ ನೀಡುವುದರಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಕೊಪ್ಪ ತಾಲೂಕಿನ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣಾ ಬಹಿಷ್ಕಾರದ ಕೂಗೆಬ್ಬಿಸಿರುವ ಹಾಡುಗಾರು ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾನು ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷನಾಗಿದ್ದೆ. ಆ ಒಂದು ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡಲು ನನಗೆ ಸಾಧ್ಯವಾಯಿತು ಎಂದರು.
ಮುಂದುವರೆದು ಮಾತನಾಡಿದ ಅವರು, ಆ ನಂತರ ರಾಜ್ಯದಲ್ಲಿ ಸರ್ಕಾರ ರಚಿಸಿದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಶೃಂಗೇರಿ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಿದ್ದಲ್ಲದೇ, ಮಲೆನಾಡು ಅಭಿವೃದ್ಧಿ ಮಂಡಳಿಯ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ನಾನು ಮಂಜೂರು ಮಾಡಿಸಿದ್ದ ಹದಿನೈದು ಕೋಟಿ ರೂಗಳ ಅನುದಾನವನ್ನು ಶಿಕಾರಿಪುರಕ್ಕೆ ವರ್ಗಾವಣೆ ಮಾಡಿ ಇಲ್ಲಿನ ಜನರಿಗೆ ಅನ್ಯಾಯ ಮಾಡಿತು. ಇದರಿಂದಾಗಿ ಕ್ಷೇತ್ರದ ಅಭಿವೃದ್ದಿಗೆ ಹಿನ್ನಡೆಯಾಗಿದ್ದು, ಈ ಪರಿಸ್ಥಿತಿಯಲ್ಲೂ ಹಾಡುಗಾರು ಗ್ರಾಮದ ಅಭಿವೃದ್ಧಿಗೆ 1 ಕೋಟಿಗೂ ಹೆಚ್ಚಿನ ಅನುದಾನ ನಾನು ನೀಡಿದ್ದೇನೆ ಎಂದು ಹೇಳಿದರು.
ಹಾಡುಗಾರು ರಸ್ತೆ ಮತ್ತು ಮೂಲ ಸೌಲಭ್ಯ ಹೋರಾಟ ಸಮಿತಿಯ ಪ್ರಮುಖ ಬೇಡಿಕೆಗಳಾದ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಅನುದಾನ ನೀಡುತ್ತೇನೆ. ಮೊದಲ ಹಂತವಾಗಿ ಸೀಗೋಡು-ಹಾಡುಗಾರು ಸಂಪರ್ಕ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಪ್ರಾರಂಭಿಸಿದ್ದು, ಉಳಿದ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಆರಂಭಿಸುತ್ತೇನೆ. ನಿಮ್ಮ ಚುನಾವಣಾ ಬಹಿಷ್ಕಾರದ ನಿಲುವನ್ನು ಕೈ ಬಿಡಬೇಕು ಎಂದು ಇದೇ ವೇಳೆ ಶಾಸಕರು ಮನವಿ ಮಾಡಿದರು.
94 ಸಿ ಹಾಗೂ ಫಾರಂ ನಂ 57 ರ ಅಡಿಯಲ್ಲಿ ಸುಮಾರು 2,000 ಅರ್ಜಿಗಳಿಗೆ ಹಕ್ಕುಪತ್ರ ನೀಡಲಾಗಿದ್ದು, ಅರಣ್ಯ ಇಲಾಖೆಯ ಅಭಿಪ್ರಾಯ ಬೇಕೆಂಬ ಸರ್ಕಾರದ ಇತ್ತೀಚಿನ ಆದೇಶದಿಂದಾಗಿ ಹಕ್ಕು ಪತ್ರ ನೀಡಲು ಅಡ್ಡಿಯಾಗಿದೆ. ಕೇವಲ ನಾನು ಮಾತ್ರವಲ್ಲ, ವಿಧಾನಪರಿಷತ್ ಉಪ ಸಭಾಪತಿ ಪ್ರಾಣೇಶ್‌ರ ಅಧ್ಯಕ್ಷತೆಯ ಕ್ಷೇತ್ರದ ನಾಲ್ಕು ಹೋಬಳಿಗಳಲ್ಲೂ ಅರಣ್ಯ ಇಲಾಖೆಯ ಅಭಿಪ್ರಾಯ ಪಡೆಯದೆ ಕಡತಗಳನ್ನು ಮಂಡಿಸಬಾರದು ಎನ್ನುವ ನಿರ್ಣಯ ಮಾಡಲಾಗಿದೆ. ಸರ್ಕಾರದ ಈ ಆದೇಶದಿಂದ ಜನರಿಗೆ ಹಕ್ಕುಪತ್ರ ನೀಡಲಾಗುತ್ತಿಲ್ಲ. ಆದ್ದರಿಂದ, ರಾಜೇಗೌಡ ಹಕ್ಕುಪತ್ರ ನೀಡುತ್ತಿಲ್ಲ ಎಂದು ಅಪಪ್ರಚಾರ ಮಾಡುವ ಬದಲು ಸರ್ಕಾರದ ಆದೇಶ ವಾಪಸಾತಿಗೆ ಬಿಜೆಪಿಗರು ಹೋರಾಟ ಮಾಡಲಿ. ಅರಣ್ಯ ಇಲಾಖೆಯ ಅಭಿಪ್ರಾಯ ಸಿಕ್ಕ ಅರ್ಜಿಗಳಿಗೆ ಶೀಘ್ರದಲ್ಲಿಯೇ ಹಕ್ಕು ಪತ್ರ ನೀಡುತ್ತೇವೆ.
ಚುನಾವಣೆಯ ನಂತರ ಯಾವ ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂದು ಗೊತ್ತಿಲ್ಲ. ಆದರೆ ಮಾಧ್ಯಮಗಳು ತೋರಿಸುತ್ತಿರುವ ಹಾಗೆ ಈ ಬಾರಿ ಕಾಂಗ್ರೆಸ್ ಪಕ್ಷ ಬರಬಹುದು. ಆ ರೀತಿಯ ವಾತಾವರಣ ಎಲ್ಲೆಡೆ ನಿರ್ಮಾಣವಾಗುತ್ತಿದೆ. ನಿಮ್ಮ ಮತಗಳ ಮೂಲಕ ನಮ್ಮ ಸರ್ಕಾರ ಆಡಳಿತಕ್ಕೆ ಬಂದಲ್ಲಿ 5 ವರ್ಷ ಅಭಿವೃದ್ದಿಯ ಕೆಲಸ ಮಾಡುತ್ತೇವೆ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.
ಇದನ್ನೂ ಓದಿ: ಕಣ್ಣೀರ ಕತೆ 12 ವರ್ಷದ ಹಿಂದೆಯೇ ಮುಗಿದು ಹೋಗಿದೆ: ಜನಾರ್ದನ ರೆಡ್ಡಿ