ಚಿಕ್ಕಮಗಳೂರು: ನಾನು ದತ್ತಮಾಲೆ ಹಾಕಿದ್ದೇನೆ ಎಂಬುದು ಕೇವಲ ಊಹಾಪೋಹ ಎಂದು ಕಾಂಗ್ರೆಸ್ ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ನಗರದಲ್ಲಿ ದತ್ತಮಾಲೆ ಧರಿಸಿರುವ ವದಂತಿ ಕುರಿತು ಸ್ಪಷ್ಟನೆ ನೀಡಿದ ಅವರು, ನಾನು ಹಾಗು ನನ್ನ ಕುಟುಂಬ ಧಾರ್ಮಿಕತೆಯಲ್ಲಿ ನಂಬಿಕೆ ಇಟ್ಟಿದ್ದೇವೆ. ಸುಬ್ರಹ್ಮಣ್ಯ ಸ್ವಾಮಿಯ ಪಂಚಮಿ ಮತ್ತು ಷಷ್ಠಿ ಹಿನ್ನೆಲೆಯಲ್ಲಿ ಕುಟುಂಬದವರು ಹರಕೆ ಹೊತ್ತುಕೊಂಡಿದ್ದರು. ಎರಡು ದಿನ ನಾವು ವ್ರತದಲ್ಲಿದ್ದೆವು. ಅದರಂತೆ ನಾನೂ ವ್ರತದಲ್ಲಿದ್ದೆ ಎಂದರು.
ಗೃಹ ಸಚಿವರು ದತ್ತಪೀಠಕ್ಕೆ ಭೇಟಿ ನೀಡಿದ ಸಂದರ್ಭ ಅವರೊಂದಿಗೆ ನಾನೂ ತೆರಳಿದ್ದೆ. ಈ ವೇಳೆ ಗೃಹ ಸಚಿವರು ದತ್ತಪೀಠದ ಸಿದ್ಧತೆ ಮತ್ತು ಬಿಗಿ ಬಂದೋಬಸ್ತ್ ಪರಿಶೀಲನೆ ನಡೆಸಿದರು. ಎಲ್ಲಾ ಅಧಿಕಾರಿಗಳೊಂದಿಗೆ ನಾವು ಸಾಮಾನ್ಯವಾಗಿ ದತ್ತಪೀಠಕ್ಕೆ ಹೋಗಿ ಬಂದಿದ್ದೇವೆ. ಪುಣ್ಯ ಸ್ಥಳಗಳಿಗೆ ದರ್ಶನ ಮಾಡುವಾಗ ಸಾಮಾನ್ಯವಾಗಿ ಎಲ್ಲರೂ ಪಾದರಕ್ಷೆಯನ್ನು ತೆಗೆದು ಹೋಗುತ್ತಾರೆ. ಹಾಗೆಯೇ ನಾನು ಕೂಡ ಪಾದರಕ್ಷೆಯನ್ನು ಧರಿಸದೇ ಹೋಗಿ ಪುಣ್ಯಕ್ಷೇತ್ರದ ದರ್ಶನ ಮಾಡಿ ಬಂದಿದ್ದೆ. ಅದಕ್ಕೆ ಇನ್ನೊಂದು ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಬಿಜೆಪಿಯಲ್ಲಿದ್ದಾಗ ಕಳೆದ 18 ವರ್ಷಗಳಿಂದ ದತ್ತಮಾಲೆ ಧರಿಸಿದ್ದೇನೆ. ಇದೀಗ ನಾನು ಜಾತ್ಯತೀತ ಪಕ್ಷವಾದ ಕಾಂಗ್ರೆಸ್ ಪಕ್ಷದ ಶಾಸಕ. ದತ್ತ ಪೀಠಕ್ಕೆ ಹೋಗಿ ಬಂದಿದ್ದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ದತ್ತಮಾಲೆ ಹಾಕುವ ಬಗ್ಗೆ ಇನ್ನೂ ಯೋಚಿಸಿಲ್ಲ: ಕಾಂಗ್ರೆಸ್ ಶಾಸಕ ಹೆಚ್.ಡಿ.ತಮ್ಮಯ್ಯ