ಚಿಕ್ಕಮಗಳೂರು: ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ತಂದಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಶೇಕಡಾ ನೂರರಷ್ಟು ಅನುಷ್ಠಾನಗೊಳಿಸಬೇಕು ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷ ಜಾರ್ಜ್ ಕುರಿಯನ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಾಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಹೆಚ್ಚಿನ ಅನುದಾನದೊಂದಿಗೆ ಜಾರಿಗೆ ತಂದಿದೆ. ಇದನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದರೊಂದಿಗೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು.
ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಸಾಂಪ್ರಾದಾಯಿಕ ಶಿಕ್ಷಣದ ಜೊತೆಗೆ ಐಚ್ಚಿಕ ವಿಷಯಗಳಾದ ಗಣಿತ, ಸಮಾಜ, ಕಂಪ್ಯೂಟರ್ ಎಜುಕೇಷನ್, ಸ್ಥಳೀಯ ಭಾಷೆಗಳು ಸೇರಿದಂತೆ ಆಂಗ್ಲ ಭಾಷೆಯ ಶಿಕ್ಷಣ ಹಾಗೂ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಸರ್ಕಾರದ ನಿಗಮಗಳಿಂದ ಅಲ್ಪಸಂಖ್ಯಾತ ಸಮುದಾಯದ ಯುವ ಜನರು ಸ್ವ-ಉದ್ಯೋಗ ಕೈಗೊಂಡು ಸ್ವಾವಲಂಬಿಗಳಾಗಲು ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ ವಾಣಿಜ್ಯ ಬ್ಯಾಂಕುಗಳಿಗೆ ಕಳಿಸಿಕೊಟ್ಟಾಗ ಅವರುಗಳಿಗೆ ಆರ್ಥಿಕ ನೆರವನ್ನು ಒದಗಿಸಬೇಕು ಎಂದರು.
ಕೇಂದ್ರ ಸರ್ಕಾರ ಹೊಸದಾಗಿ ಪ್ರಧಾನ ಮಂತ್ರಿಗಳ ಜನ ವಿಕಾಸ್ ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪಾಲಿಟೆಕ್ನಿಕ್ ಮತ್ತು ಐಟಿಐ ಕಾಲೇಜುಗಳು, ಹಾಸ್ಟೆಲ್‌ಗಳು ಸೇರಿದಂತೆ ಸ್ಮಾರ್ಟ್ ಕ್ಲಾಸ್‌ಗಳ ನಿರ್ಮಾಣಕ್ಕೆ 10 ಕೋಟಿಗಳ ಅನುದಾನವನ್ನು ನೀಡಲಾಗುವುದು ಎಂದರು.