ಚಿಕ್ಕಮಗಳೂರು: ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಜಿಲ್ಲೆಯ ಕಲೆ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸುವ ಚಿಕ್ಕಮಗಳೂರು ಜಿಲ್ಲಾ ಉತ್ಸವದ ಲಾಂಛನವನ್ನು ಹಾಗೂ ಫೇಸ್‌ಬುಕ್ ಪೇಜ್‌ನ್ನು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಫೆಬ್ರವರಿ 28, 29 ಮತ್ತು ಮಾರ್ಚ್ 1 ರಂದು ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನ ಹಾಗೂ ಕುವೆಂಪು ಕಲಾ ಮಂದಿರದಲ್ಲಿ ಚಿಕ್ಕಮಗಳೂರು ಹಬ್ಬ ನಡೆಯಲಿದ್ದು, ಈ ಹಬ್ಬದಲ್ಲಿ ಯಾವುದೇ ಲೋಪವಿಲ್ಲದಂತೆ ಅದ್ಧೂರಿಯಾಗಿ ನಡೆಯಲು 15 ಸಮಿತಿಗಳನ್ನು ರಚಿಸಲಾಗಿದೆ. ಹಬ್ಬದಲ್ಲಿ ನಾಟಕೋತ್ಸವ, ಸಿನಿಮೋತ್ಸವ, ಸಂಗೀತ, ನೃತ್ಯ, ಜಾನಪದ ಕಲಾ ಪ್ರದರ್ಶನ ಏರ್ಪಡಿಸಲಾಗುವುದು ಹಾಗೂ ವಿವಿಧ ವಯೋಮಾನಗಳಿಗೆ ಅನುಗುಣವಾಗಿ ಗ್ರಾಮೀಣ ಕ್ರೀಡೆಗಳು ಅಲ್ಲದೇ ಜಿಲ್ಲಾ ಮತ್ತು ರಾಜ್ಯ ಮಟ್ಟದ ಹೊರಾಂಗಣ ಮತ್ತು ಒಳಾಂಗಣ ಕ್ರೀಡೆಗಳನ್ನ ಏರ್ಪಡಿಸಲಾಗಿದೆ ಎಮದು ತಿಳಿಸಿದರು.
ಈ ಉತ್ಸವದಲ್ಲಿ 600 ಕಲಾವಿದರೊಳಗೊಂಡ 40 ಜಾನಪದ ಕಲಾತಂಡಗಳ ಬೃಹತ್ ಮೆರವಣಿಗೆ ನಡೆಯಲಿದೆ. ಉತ್ಸವದಲ್ಲಿ ಭಾಗವಹಿಸುವ ಕಲಾವಿದರು ಹಾಗೂ ಗಣ್ಯ ವ್ಯಕ್ತಿಗಳಿಗೆ ವ್ಯವಸ್ಥಿತವಾದ ವಸತಿ ಮತ್ತು ಆಹಾರ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಆಟದ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಆಗಲಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಇಡಿ ಪರದೆಗಳನ್ನು ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಯಾವುದೇ ದೋಷವಾಗದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುವುದು. ಜೊತೆಗೆ ಉತ್ಸವದಲ್ಲಿ 20 ಕ್ಕೂ ಹೆಚ್ಚು ವಿವಿಧ ಇಲಾಖೆಗಳ ವಸ್ತು ಪ್ರದರ್ಶನ, ಮುಖ್ಯವಾಗಿ ಸಿರಿಧಾನ್ಯ ಪ್ರದರ್ಶನ, ಆಧುನಿಕ ಕೃಷಿ ಉಪಕರಣಗಳು, ಕಮ್ಮಾರಿಕೆ, ಕುಂಬಾರಿಕೆ ಹಾಗೂ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತ ವಿಡಿಯೋ ತುಣುಕುಗಳ ಪ್ರದರ್ಶನವೂ ನಡೆಯಲಿದೆ ಎಂದು ಹೇಳಿದರು.
ಮೈಸೂರು ದಸರಾ ಉತ್ಸವ ಹೋಲುವಂತೆ ನಗರವನ್ನು ಮೆರಗುಗೊಳಿಸಲು ದೀಪ, ಬಾಳೆ, ತೆಂಗು, ತಳಿರು ತೋರಣಗಳಿಂದ ಹಾಗೂ ವಿವಿಧ ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕರಿಸಿ. ನಗರದ ಮುಖ್ಯ ದ್ವಾರಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಟಿ. ರವಿ ಹೇಳಿದರು.