ಚಿಕ್ಕಮಗಳೂರು: ಜಿಲ್ಲೆಯ ಸಾಂಸ್ಕೃತಿಕ ಕಲೆ, ಸಾಹಿತ್ಯ ಹಾಗೂ ಕ್ರೀಡೆಗಳನ್ನು ಉತ್ತೇಜಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಿಕ್ಕಮಗಳೂರಿನ ಜಿಲ್ಲಾಡಳಿತ ಇದೇ ತಿಂಗಳು 28 ರಿಂದ ಮಾರ್ಚ್ 1 ರವರೆಗೆ ಜಿಲ್ಲಾ ಉತ್ಸವ ಆಯೋಜಿಸಿದ್ದು, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಿಟಿ ರವಿ ಮಾಧ್ಯಮಗೋಷ್ಟಿ ನಡೆಸಿ ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ವಿವರವನ್ನು ನೀಡಿದರು.
ಜಿಲ್ಲಾ ಉತ್ಸವ ಹಿನ್ನೆಲೆ ವಿವಿಧ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಕ್ರೀಡೋತ್ಸವವನ್ನು ಆಚರಿಸಲಾಗುತ್ತದೆ. ಜಿಲ್ಲಾ ಆಟದ ಮೈದಾನದಲ್ಲಿ ವಸ್ತುಗಳ ಪ್ರದರ್ಶನ ಹಾಗೂ ನಾಟಕೋತ್ಸವ, ಸಿನಿಮೋತ್ಸವ, ಸಾಂಸ್ಕೃತಿಕ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜಿಲ್ಲಾ ಉತ್ಸವದಲ್ಲಿ ಅನಾವರಣಗೊಳ್ಳಲಿವೆ ಎಂದು ಹೇಳಿದರು. ಹಾಗೆಯೇ ಆಹಾರಮೇಳ, ಬೀದಿ ಉತ್ಸವ, ಸೇರಿದಂತೆ ಹೆಲಿಟೂರಿಸಂಅನ್ನು ಕೂಡ ಜಿಲ್ಲಾ ಉತ್ಸವದಲ್ಲಿ ಆಯೋಜಿಸಲಾಗಿದ್ದು, ಪ್ರಮುಖವಾಗಿ ನಾಳೆಯಿಂದ ಜಲಸಾಹಸ, ಭೂ ಸಾಹಸ ಹಾಗೂ ವಾಯು ಸಾಹಸ ಕ್ರೀಡೆಗಳು ನಡೆಯಲಿವೆ.
ಈ ಉತ್ಸವದಲ್ಲಿ ಎಲ್ಲ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಚಿವ ಸಿಟಿ ರವಿ ಮನವಿ ಮಾಡಿದರು. ನಲ್ಲೂರು ಕೆರೆಯಲ್ಲಿ ಜೆಟ್ಸ್ಕಿ, ಸ್ಪೀಡ್ ಬೋಟ್, ರಾಫ್ಟಿಂಗ್, ವಾಟರ್ ರೋಲರ್ ಗಳನ್ನು ಆಯೋಜನೆ ಮಾಡಿದ್ದು ಸ್ಕೂಬಾ ಡೈವಿಂಗ್, ಸೇರಿದಂತೆ ವಿವಿಧ ಸಾಹಸ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.