ಚಿಕ್ಕಮಗಳೂರು: ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯನವರೇ ವಯಸ್ಸು ಆದ ಮೇಲೆ ಪ್ರಬುದ್ಧತೆ ಬರಬೇಕು, ಮನಸ್ಸು ಪಕ್ವ ಆಗಬೇಕು, ಪೂರ್ವ ಗ್ರಹ ಪೀಡಿತ ಮನಸ್ಸಿನಿಂದ ಹೊರ ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿರುವ ಸಚಿವರ ಸಿ ಟಿ ರವಿ, ಸಂಘ ಪರಿವಾರದವರು ಕೊಲೆ ಆರೋಪಿಗಳು ಅಂತಾ ಟ್ವೀಟ್ ಮಾಡಿದ್ದೀರಿ. ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ, ಸಂಘವನ್ನು ಎಷ್ಟು ಹತ್ತಿರದಿಂದ ನೀವು ನೋಡಿದ್ದೀರಿ, ನಾನು ಸಂಘದ ಸ್ವಯಂ ಸೇವಕ, ಸಂಘದ ಕಾರಣದಿಂದಲೇ ಎಂಎಲ್ಎ ಹಾಗೂ ಸಚಿವ ಆಗಿರೋದು. ನರೇಂದ್ರ ಮೋದಿ ಅವರು ಪ್ರಧಾನಿ ಆಗಿರೋದು. ಸಂಘ ಹೇಳಿ ಕೊಡುವುದು ದೇಶ ಭಕ್ತಿಯನ್ನು, ಸಂಸ್ಕಾರವನ್ನು. ಹತ್ಯೆಯನ್ನು ಸಂಘ ಹೇಳಿಕೊಟ್ಟಿದ್ದರೇ, ಟೀಕೆ ಮಾಡೋರನ್ನು ಕೊಲೆ ಮಾಡಬೇಕು ಎಂಬುದು ಸಂಘದ ಮನೋಭಾವ ಇದ್ದಿದ್ದರೇ ಬಹಳ ಜನ ಈ ಭೂಮಿಯ ಮೇಲೆ ಇರುತ್ತಿರಲಿಲ್ಲ. ಬಹಳ ಜನ ಟೀಕಿಸಿಯೂ ಉಳಿದಿದ್ದಾರೆ ಎಂದರೇ ಸಂಘ ಹತ್ಯೆಯ ರಾಜಕರಣದಲ್ಲಿ ನಂಬಿಕೆ ಇಟ್ಟಿಲ್ಲ. ಈ ರೀತಿಯ ಸುಳ್ಳನ್ನು ಎಷ್ಟು ಬಾರಿ ಹೇಳುತ್ತಿರಾ ಎಂದು ಪ್ರಶ್ನಿಸಿದರು.
ಗಾಂಧಿ ಜೀ ಹತ್ಯೆ ಆರೋಪವನ್ನು ನಿಮ್ಮ ಕಾಂಗ್ರಸ್ ಮುಖಂಡರು ಪದೇ ಪದೇ ಸಂಘದ ಮೇಲೆ ಹಾಕಿದ್ದರು. ಗಾಂಧಿ ಹತ್ಯೆಗೂ ಆರ್ಎಸ್ಎಸ್ಗೆ ಯಾವುದೇ ಸಂಬಂಧವಿಲ್ಲ ಎಂದು ಆಗಿನ ಸರ್ಕಾರವೇ ನೇಮಿಸಿದ್ದ ಕಪೂರ ಕಮೀಷನ್ ಹೇಳಿತ್ತು. ಆರೋಪ ಮಾಡಿದವರೇ ಬೇಷರತ್ತಾಗಿ ಸಂಘದ ಮೇಲಿದ್ದ ನಿಷೇಧ ವಾಪಸ್ಸು ತೆಗೆದಿದ್ದರು. ಈಗ ನೀವು ಅದೇ ಆರೋಪ ಮಾಡುತ್ತಿದ್ದೀರಾ. ಈ ಹಿಂದೆ ನೀವೇ 5 ವರ್ಷ ಅಧಿಕಾರದಲ್ಲಿದ್ದೀರಿ. ನೀವು ಸಂಘ ನಿಷೇಧಕ್ಕೆ ಶಿಫಾರಸ್ಸು ಮಾಡಬಹುದಿತ್ತು. ನಿಮ್ಮಗೆ ಬ್ಯಾಟರಿ ಇರಲಿಲ್ವಾ?. ನಿಮ್ಮ ರಾಜಕೀಯ ತೆವಲಿಗೆ ಒಂದು ದೇಶಭಕ್ತ ಸಂಘಟನೆ ಮೇಲೆ ಸುಳ್ಳು ಆರೋಪ ಮಾಡುವ ಕೆಲಸ ಮಾಡಬೇಡಿ, ವಾಸ್ತವದ ನೆಲೆಯ ಮೇಲೆ ಟ್ವೀಟ್ ಮಾಡೋದಕ್ಕೆ ನಿಮ್ಮ ಟ್ವಿಟ್ಟರ್ ನಿರ್ವಹಿಸುವವರಿಗೆ ಹೇಳಿ. ಇಲ್ಲದಿದ್ದರೆ ಕಡೆಗಾಲದಲ್ಲಿ ನಿಮ್ಮನ್ನೂ ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಸಂಘ ಜಾತಿವಾದಿಯೂ ಅಲ್ಲ ದೇಶದ್ರೋಹಿಯೂ ಅಲ್ಲ. ಸಂಘವನ್ನು ಟೀಕಿಸುವ ಭರದಲ್ಲಿ, ನೀವು ದೇಶ ಹೊಡೆಯುವ ಸಂಚು ರೂಪಿಸುವ ಮನೋಭಾವ ಇರೋರಿಗೆ ಬೆಂಬಲಿಸುವ ಪಾಪದ ಕೆಲಸಕ್ಕೆ ಹೋಗಬೇಡಿ. ಸಂಘವನ್ನು ಟೀಕೆ ಮಾಡುವುದರ ಜೊತೆಗೆ ಸಂಘ ಮಾಡುತ್ತಿರುವ ಕೆಲಸದ ಬಗ್ಗೆ ತಿಳಿದುಕೊಳ್ಳಿ. ಸ್ವಯಂ ಸಂಘತ್ವ ಮೈಗೂಡಿಕೊಳ್ಳುವನ್ನು ಕೊನೆಯವರೆಗೂ ದೇಶಭಕ್ತನಾಗಿಯೇ ಇರುತ್ತಾನೆ ಎಂದು ಸಚಿವ ಸಿ ಟಿ ರವಿ ಹೇಳಿದರು.