ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈವರೆಗೂ ಕೊರೊನಾ ಸೋಂಕಿನಿಂದ 6 ಜನರು ಮೃತಪಟ್ಟಿದ್ದಾರೆ. ಇವರಲ್ಲಿ ಐವರು ಚಿಕ್ಕಮಗಳೂರು ನಗರದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಐವರಲ್ಲಿ 2-3 ಸೋಂಕಿತರ ಅಂತ್ಯಸಂಸ್ಕಾರವನ್ನು ಜಿಲ್ಲಾಡಳಿತ ನಗರದ ಹೊರವಲಯದ ನರಗನ ಹಳ್ಳಿಯ ಸಿಡಿಎ ಲೇಜೌಟ್ ಹಿಂಭಾಗದಲ್ಲಿ ನೆರವೇರಿಸಿದೆ.
ಅಂತ್ಯಸಂಸ್ಕಾರ ಮಾಡಿದ ನಂತರ ಸಿಬ್ಬಂದಿ ಧರಿಸಿದ್ದ ಪಿಪಿಇ ಕಿಟ್ ಹಾಗೂ ಗ್ಲೌಸ್ಗಳನ್ನು ದಾರಿಯಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ. ಈ ವಸ್ತುಗಳನ್ನು ನೋಡಿದ ಸ್ಥಳೀಯರು ಆತಂಕಕ್ಕೊಳಗಾಗಿದ್ದು, ಈ ದಾರಿಯಲ್ಲಿ ಕಾಫಿ ತೋಟದ ಕೆಲಸಕ್ಕೆ ಹೋಗುವ ಕಾರ್ಮಿಕರು ಈ ರಸ್ತೆಯಲ್ಲಿ ಸಂಚಾರ ಮಾಡೋದಕ್ಕೂ ಭಯ ಪಡುವಂತಾಗಿದೆ.
ಕೆಲ ಬೀದಿ ನಾಯಿಗಳು ರಸ್ತೆಯಲ್ಲಿ ಬಿಸಾಡಿ ಹೋಗಿರುವ ಈ ವಸ್ತುಗಳನ್ನು ಎಳೆದುಕೊಂಡು ಹೋಗುತ್ತಿವೆ. ಸಿಬ್ಬಂದಿಯ ಈ ನಿರ್ಲಕ್ಷ್ಯಕ್ಕೆ ಇಲ್ಲಿನ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ವಸ್ತುಗಳಿಂದ ಕೊರೊನಾ ಬರಬಹುದಾ? ಎಂಬ ಆತಂಕದಲ್ಲಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ರೀತಿಯ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಅನ್ನೋದು ಸ್ಥಳೀಯರ ಆಗ್ರಹ.