ಚಿಕ್ಕಮಗಳೂರು: ನಗರದ ಮುಳ್ಳಯ್ಯನಗಿರಿಯ ತಪ್ಪಲಿನಲ್ಲಿರುವ ಇತಿಹಾಸ ಪ್ರಸಿದ್ಧ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಅದ್ಧೂರಿಯಾಗಿ ನಡೆಯಿತು.
ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆದ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.
ಹೋಳಿ ಹಬ್ಬದ ಮುನ್ನಾದಿನ ಜರುಗುವ ರಥೋತ್ಸವ ಇದಾಗಿದ್ದು, ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಎಂದಿನಂತೆ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಬೃಹದಾಕಾರದ ರಥವನ್ನು ಎಳೆಯುತ್ತಿದ್ದಂತೆ ನೆರೆದಿದ್ದ ಭಕ್ತ ಸಮೂಹ ಜಯಕಾರ ಕೂಗಿದರು.
ರಥವನ್ನು ದೇವಾಲಯದ ಸುತ್ತಲೂ ಒಂದು ಸುತ್ತು ಎಳೆಯುತ್ತಿದ್ದಂತೆ ಭಕ್ತರು ಬಾಳೆಹಣ್ಣು, ಹೂವುಗಳನ್ನು ರಥದತ್ತ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಾಜ್ಯದ ಅತ್ಯಂತ ಎತ್ತರವಾದ ಪ್ರದೇಶವಾದ ಮುಳ್ಳಯ್ಯನಗಿರಿಯ ತಪ್ಪಲಿನಲ್ಲಿ ಸೀತಾಳಯ್ಯನ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ನಡೆಯುವುದು ವಿಶೇಷ.
ದೇವಸ್ಥಾನದಲ್ಲಿ ದೇವರಿಗೆ ವಿಶೇಷವಾದ ಪೂಜೆ ಸಲ್ಲಿಸಿದ ನಂತರ ಆವರಣದಲ್ಲಿ ದೇವರನ್ನು ಪ್ರದಕ್ಷಿಣೆ ಮಾಡಲಾಯಿತು. ನಂತರ ಆವರಣದಲ್ಲಿ ದೇವರಿಗೆ ಉಯ್ಯಾಲೆಯ ರೀತಿಯಲ್ಲಿ ಮೆರವಣಿಗೆ ಮಾಡಿ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಹೊರಭಾಗದಲ್ಲಿ ಹೂಗಳಿಂದ ಶೃಂಗಾರವಾಗಿ ನಿಂತಿದ್ದ ಎರಡೂ ರಥದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ದೇವಸ್ಥಾನದ ಸುತ್ತ ರಥೋತ್ಸವ ನೆರವೇರಿಸಲಾಯಿತು.