ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ನಲ್ಲಿ ಪ್ರೀತಿಸಿದ ಹುಡುಗಿ ಬೇರೆ ಮದುವೆ ಮಾಡಿಕೊಳ್ಳುತ್ತಿದ್ದಾಳೆಂದು ಮನನೊಂದು ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿದೆ.
ಮಾತ್ರೆ ಸೇವಿಸಿ ಪ್ರಿಯಕರ ರಾಘವೇಂದ್ರ (33) ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರಾಘವೇಂದ್ರ ಹಾಗೂ ಯುವತಿ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಹುಡುಗಿ ಮನೆಯಲ್ಲಿ ಬೇರೆ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ಮಗಳನ್ನ ಬೇರೆ ವರನೊಂದಿಗೆ ಪೋಷಕರು ಮದುವೆ ಮಾಡಲು ಹೊರಟಿರುವ ಕಾರಣ ಮನನೊಂದು ಪ್ರಿಯಕರ ರಾಘವೇಂದ್ರ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದ ರಾಘವೇಂದ್ರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.