ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರೆದಿದೆ. ಮಳೆಯ ಅಬ್ಬರಕ್ಕೆ ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಚಿಕ್ಕಮಗಳೂರು ತಾಲೂಕಿನ ಕಾಮೇನಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿಯಿಂದಲೂ ರಸ್ತೆಯ ಮೇಲೆ ಹಳ್ಳದ ನೀರು ಉಕ್ಕಿ ಹರಿಯುತ್ತಿದೆ. ಮುಳ್ಳಯ್ಯನಗಿರಿ ಭಾಗದಲ್ಲಿ ಭಾರಿ ಮಳೆ ಹಿನ್ನೆಲೆ, ಹಳ್ಳದ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆ ಆಗುತ್ತಿದೆ. ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ ಮಲ್ಲೇನಹಳ್ಳಿ, ಕಾಮೇನಹಳ್ಳಿ ಗ್ರಾಮಸ್ಥರು ಪರದಾಟ ನಡೆಸುತ್ತಿದ್ದಾರೆ.
ಕೊಪ್ಪ ತಾಲೂಕಿನ ಹೆರೂರು ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಸುಮಾರು 90 ಅಡಿ ಭೂ ಕುಸಿತ ಉಂಟಾಗಿರುವ ಘಟನೆಯೂ ನಡೆದಿದೆ. ಸುಮಾರು ಏಳಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು, ಶಾಂತಿ ಕೂಡಿಗೆ, ಶುಂಠಿ ಕೂಡಿಗೆ, ಬಿಟ್ಟ ಕೂಡಿಗೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಮಳೆ ಹೆಚ್ಚಾದಂತೆ ಸ್ವಲ್ಪ ಸ್ವಲ್ಪವೇ ಭೂಮಿ ಕುಸಿಯುತ್ತಿದೆ. ಇದೀಗ ಮತ್ತಷ್ಟು ರಸ್ತೆ ಕುಸಿಯುವ ಭೀತಿಯಲ್ಲಿ ಜನರು ಸಿಲುಕಿದ್ದಾರೆ. ಕೊಪ್ಪ ತಾಲೂಕಿನ ಹೆರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮಗಳು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ ಬೋವಿ ಕಾಲೋನಿಯಲ್ಲಿ ಗಾಳಿ ಮಳೆ ಆರ್ಭಟಕ್ಕೆ ಮನೆಯ ಮಾಳಿಗೆ ಹಾರಿ ಹೋಗಿರುವ ಘಟನೆ ನಡೆದಿದೆ. ಮನೆ ಸಂಪೂರ್ಣ ಜಖಂ ಆಗಿದೆ. ಅದೃಷ್ಟವಶಾತ್ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮದ ದೊಡ್ಡಮುನಿ ಬೋವಿ ಎಂಬುವರಿಗೆ ಸೇರಿದ ಮನೆ ಇದಾಗಿದೆ ಎಂಬುದು ತಿಳಿದು ಬಂದಿದೆ.
ಫಾಲ್ಸ್ಗಳಿಗೆ ತೆರಳದಂತೆ ಜಿಲ್ಲಾಡಳಿತದಿಂದ ನಿರ್ಬಂಧ: ಮನೆಯಲ್ಲಿದ್ದ ಆಹಾರ ಪದಾರ್ಥ, ಪೀಠೋಪಕರಣಗಳಿಗೂ ಹಾನಿಯಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಂದು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಇವುಗಳನ್ನು ನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮವಾಗಿ ಫಾಲ್ಸ್ಗಳಿಗೆ ನಿರ್ಬಂಧ ಹಾಕಲಾಗಿದೆ.
ಕೆಲವೊಂದು ಫಾಲ್ಸ್ಗಳಿಗೆ ತೆರಳದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು, ಸಿರಿಮನೆ ಫಾಲ್ಸ್ಗೆ ಪ್ರವಾಸಿಗರು ತೆರಳದಂತೆ ನಿರ್ಬಂಧ ಹಾಕಲಾಗಿದೆ. ಚಿಕ್ಕಮಗಳೂರಿನಿಂದ ಮಂಗಳೂರಿಗೆ ಕೆಎಸ್ಆರ್ಟಿಸಿ ಬಸ್ ತೆರಳುತ್ತಿದ್ದಾಗ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿರುವ ಘಟನೆ ನಡೆದಿದೆ. ಕ್ಷಣಾರ್ಧದಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಮೂಡಿಗೆರೆ ಸಮೀಪದ ಹಾಂದಿ ಗ್ರಾಮದ ಬಳಿ ಈ ಘಟನೆ ನಡೆದಿದೆ.
ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ : ಚಿಕ್ಕಮಗಳೂರು ಮಂಗಳೂರು ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಜಿಲ್ಲೆಯ ಮತ್ತೊಂದು ಭಾಗದಲ್ಲಿ ಮಳೆಯ ಆರ್ಭಟಕ್ಕೆ ಮನೆ ಸಂಪೂರ್ಣ ಜಖಂ ಆಗಿದೆ. ಮನೆಯಲ್ಲಿದ್ದ ಕುಟುಂಬಸ್ಥರು ಪ್ರಾಣಪಾಯದಿಂದ ಪಾರಾಗಿದ್ದು, ಮೂಡಿಗೆರೆ ತಾಲೂಕಿನ ಸಾಲುಮರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ನಿನ್ನೆ ತಡರಾತ್ರಿ ಮನೆಯಲ್ಲಿ ಮಲಗಿದ್ದಾಗ ಈ ಅವಘಡ ಜರುಗಿದೆ. ಗ್ರಾಮದ ಬೈರಯ್ಯ ಎಂಬುವರ ಮನೆಗೆ ಸಂಪೂರ್ಣ ಹಾನಿ ಆಗಿದೆ. ಮನೆಯಲ್ಲಿದ್ದ ದವಸ ಧಾನ್ಯ, ಪಾತ್ರೆಗಳು ನಾಶವಾಗಿವೆ. ಈಗಾಲೇ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ದವಸ, ಧಾನ್ಯ ವಸ್ತುಗಳು ಸಂಪೂರ್ಣ ನಾಶ: ಸುರಿಯುತ್ತಿರುವ ಮಳೆ, ಭೀಕರ ಗಾಳಿಗೆ ಮನೆಗಳು ನೆಲಸಮವಾಗುತ್ತಿರುವ ಘಟನೆಗಳು ನಡೆಯುತ್ತಿದೆ. ರಾತ್ರಿ ಸುರಿದ ಮಳೆಗೆ ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಮನೆ ಕುಸಿದಿದ್ದು, ತಳವಾರ ಗ್ರಾಮದ ಮಂಜುಳ ಎಂಬುವವರ ಮನೆ ಸಂಪೂರ್ಣ ಹಾನಿಯಾಗಿದೆ. ಮನೆಯಲ್ಲಿದ್ದ ದವಸ, ಧಾನ್ಯ ವಸ್ತುಗಳು ಸಂಪೂರ್ಣ ನಾಶವಾಗಿದೆ. ಮನೆ ಕಳೆದುಕೊಂಡ ಕುಟುಂಬ ಬೀದಿಗೆ ಬಿದ್ದಿದೆ.
ಇದನ್ನೂ ಓದಿ: ನಂಜನಗೂಡಿನಲ್ಲಿ ಸ್ನಾನಘಟ್ಟ ಮುಳುಗಡೆ; ಡ್ರೋನ್ ಕಣ್ಣಿನಲ್ಲಿ ಕಬಿನಿ ಜಲಾಶಯದ ದೃಶ್ಯ- ವಿಡಿಯೋ