ಚಿಕ್ಕಮಗಳೂರು: ಉತ್ತರ ಭಾರತದಲ್ಲಿ ರೈತರ ನಿದ್ದೆಗೆಡಿಸಿರುವ ಮಿಡತೆಗಳು ಕಾಫೀ ನಾಡು ಚಿಕ್ಕಮಗಳೂರು ಜಿಲ್ಲೆಗೂ ಕಾಲಿಟ್ಟು ರೈತರನ್ನು ಕಂಗಾಲಾಗಿಸಿವೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ತೆಕ್ಕೂರು ಗ್ರಾಮದಲ್ಲಿ ಈ ಮಿಡತೆಗಳು ಪ್ರತ್ಯಕ್ಷವಾಗಿದ್ದು, ಅಡಿಕೆ ತೋಟಗಳಿಗೆ ಈ ಮಿಡತೆಗಳು ಲಗ್ಗೆ ಇಟ್ಟು ಮರದ ಗರಿಗಳನ್ನು ಸಂಪೂರ್ಣವಾಗಿ ತಿಂದು ತೇಗಿವೆ.
ಈ ಮಿಡತೆಗಳಿಂದ ಮಲೆನಾಡಿನ ರೈತರು ಕಂಗಲಾಗಿದ್ದು, ಈಗಾಗಲೇ ಅಡಿಕೆಗೆ ಹಳದಿ ಎಲೆ ರೋಗ ಬಂದು ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಮಿಡತೆಗಳು ಕಾಣಿಸಿಕೊಂಡಿರುವುದು ಇಲ್ಲಿನ ರೈತರಿಗೆ ಗಾಯದ ಮೇಲೆ ಮತ್ತೆ ಬರೆ ಎಳೆದಂತಾಗಿದೆ.
ಈ ಭಾಗದ ಕೆಲ ರೈತರು ತೋಟವನ್ನು ನಿರ್ವಹಣೆ ಮಾಡಲಾಗದೇ ನಗರ ಪ್ರದೇಶದ ಕಡೆಗೆ ಮುಖ ಮಾಡಿದ್ದರು. ಇನ್ನೂ ಕೆಲ ರೈತರು ನಾನಾ ರೀತಿಯ ಔಷಧಗಳನ್ನು ಸಿಂಪಡಿಸಿ, ಅಡಿಕೆ ಬೆಳೆ ಮೇಲೆಯೇ ಅವಲಂಬಿತರಾಗಿದ್ದಾರೆ.
ಅಲ್ಲದೆ, ಎರಡು ಮೂರು ವರ್ಷಗಳಿಂದ ಸುರಿಯುತ್ತಿರುವ ಮಳೆಯಿಂದ ಕೊಳೆ ರೋಗವೂ ಇವರಿಗೆ ಬಾಧಿಸುತ್ತಿದ್ದು, ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇದರ ಜೊತೆ ಈಗ ಮಿಡತೆ ಕಾಣಿಸಿಕೊಂಡಿದ್ದು, ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಪರಿಸ್ಥಿತಿ ಎಲ್ಲಿಗೆ ಬಂದೂ ನಿಲ್ಲುತ್ತೋ ಎಂದು ಮಲೆನಾಡು ಭಾಗದ ರೈತರು ಚಿಂತೆಗೀಡಾಗಿದ್ದಾರೆ.