ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅದನ್ನು ಸೆರೆ ಹಿಡಿದಿರುವ ಘಟನೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಮೇಶ್ ಎಂಬವರ ತೋಟದಲ್ಲಿ ನಿನ್ನೆ ಸಂಜೆ ಕಾಣಿಸಿಕೊಂಡ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಿಡಿಯುವಲ್ಲಿ ಯಶಸ್ವಿಯಾದರು.
ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಕಾಫಿ ಗಿಡಗಳ ನಡುವೆ ಚಿರತೆ ಇರುವುದು ಗೋಚರಿಸಿದೆ. ತಕ್ಷಣ ತೋಟದ ಮಾಲೀಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಚಿರತೆಗೆ ಬಲೆ ಹಾಕಿ ಬಂಧಿಸಿದರು.
ಚಿರತೆ ಗಾಯಗೊಂಡಿದ್ದರಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಮೂಡಿಗೆರೆ ಪಶು ಆಸ್ಪತ್ರೆಗೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಆರೋಗ್ಯ ಸುಧಾರಿಸುವ ಲಕ್ಷಣ ಗಮನಿಸಿ ಸಂಬಂಧಿಸಿದ ಮೃಗಾಲಯ ಅಥವಾ ಕಾಡಿಗೆ ಬಿಡುವ ನಿರ್ಧಾರ ಕೈಗೊಳ್ಳುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಆಹಾರ ಅರಸಿ ನಾಡಿಗೆ ಬಂದು ಬಾವಿಗೆ ಬಿದ್ದ ಚಿರತೆ ರಕ್ಷಣೆ