ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋಳಿ ಹಿಡಿಯಲು ಕಾಡಿನಿಂದ ನಾಡಿಗೆ ಬಂದ ಚಿರತೆಯನ್ನು ಸೆರೆ ಹಿಡಿಯಲಾಗಿದೆ.
ಚಿಕ್ಕಮಗಳೂರಿನ ಮಲ್ಗಾರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚಂದ್ರೇಗೌಡ ಎಂಬುವರ ಕೋಳಿ ಗೂಡಿಗೆ ಚಿರತೆ ನುಗ್ಗಿ ಕಳೆದೆರಡು ದಿನಗಳಿಂದ ಕೋಳಿಗಳನ್ನು ಹಿಡಿಯಲು ಪ್ರಯತ್ನಿಸಿತ್ತು. ಅಲ್ಲದೇ, ಕೋಳಿ ಮಾಲೀಕ ಚಂದ್ರೇಗೌಡರ ಮೇಲೆ ದಾಳಿ ಮಾಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದರು.
ಬೋನಿನಲ್ಲಿ ಕೋಳಿ ಇಟ್ಟು ಚಿರತೆ ಸೆರೆ ಹಿಡಿಯುವ ಪ್ರಯತ್ನಕ್ಕೆ ಕೈ ಹಾಕಿದ್ದ ಅರಣ್ಯ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದ್ದಾರೆ. ಕೋಳಿ ಆಸೆಗೆ ಚಿರತೆ ಬಂದು ಬೋನಿನಲ್ಲಿ ಸೆರೆಯಾಗಿದ್ದು, ಭದ್ರಾ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಸೆರೆ ಹಿಡಿದ ಚಿರತೆಯನ್ನು ಭದ್ರಾ ಅಭಯಾರಣ್ಯಕ್ಕೆ ಬಿಟ್ಟಿದ್ದು, ಚಿರತೆಯನ್ನು ಸೆರೆ ಹಿಡಿದಿದ್ದಕ್ಕೆ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.