ಚಿಂತಾಮಣಿ: ತಾಲೂಕಿನ ಕಸಬಾ ಹೋಬಳಿ ಮಾಳಪ್ಪಲ್ಲಿ ಗ್ರಾಮದ ಸರ್ವೆ ನಂ.63 ಹಾಗೂ 65 ರ ಖರಾಬು ಜಮೀನು ಒತ್ತುವರಿ ಮಾಡಿಕೊಂಡು ಭೂ ಪರಿವರ್ತನೆಯಾಗಿದೆ ಎಂಬ ಆರೋಪದಡಿ ಇಂದು 3ನೇ ಬಾರಿ ಜಿಲ್ಲೆಯ ಅಧಿಕಾರಿಗಳು ಪೊಲೀಸರ ನೆರವಿನಿಂದ ಸರ್ವೆ ನಡೆಸಿದರು.
ನ್ಯಾಯಾಲಯದ ಆದೇಶದಂತೆ ಕಳೆದ 2 ಬಾರಿ ಸರ್ವೆ ಕಾರ್ಯ ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆದಿತ್ತು. ಆದರೆ, ಸರ್ವೆ ಕಾರ್ಯ ಪೂರ್ತಿಯಾಗದ ಹಿನ್ನೆಲೆ ಇಂದು ಮತ್ತೆ ಅದೇ ಜಮೀನಿನ ಸರ್ವೆ ಕಾರ್ಯ ಜಿಲ್ಲೆಯ ಅಧಿಕಾರಿಗಳೊಂದಿಗೆ ನಡೆಯಿತು. ಸದ್ಯ ಸರ್ವೆ ಕಾರ್ಯ ಮುಗಿಸಿದ ಅಧಿಕಾರಿಗಳು ವರದಿಯನ್ನು ಜಿಲ್ಲಾ ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಸದರಿ ಜಮೀನುಗಳು ಭೂಪರಿವರ್ತನೆಯಾಗಿದ್ದು, ಅಭಿವೃದ್ಧಿಪಡಿಸುವ ಸಮಯದಲ್ಲಿ ಖರಾಬು ಜಮೀನನ್ನು ಸೇರಿಸಿಕೊಂಡು ಅಕ್ರಮವಾಗಿ ಲೇಔಟ್ ಮಾಡಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ನ್ಯಾಯಲಯದಲ್ಲಿ ದೂರು ದಾಖಲಾಗಿತ್ತು. ದೂರಿನ ಅನ್ವಯ ಸರ್ವೆ ಕಾರ್ಯ ನಡೆಸಲಾಗುತ್ತಿದೆ.
ಜಮೀನಿನ ಮಾಲೀಕ ಹಾಗೂ ನಗರಸಭೆ ಸದಸ್ಯ ಮಹೇಶ್ ಮಾತನಾಡಿ, ಕೆಲವರು ರಾಜಕೀಯ ದುರುದ್ದೇಶದಿಂದ ನಮ್ಮ ಮೇಲೆ ದ್ವೇಷ ಸಾಧಿಸಲು ಇಂತಹ ಕೆಲಸಗಳನ್ನು ಮಾಡಿಸುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡರ ಮೇಲೆ ಆರೋಪ ಮಾಡಿದ್ದಾರೆ.