ಚಿಕ್ಕಮಗಳೂರು: ಮಲೆನಾಡು ಎಂದರೆ ಹೊರ ಭಾಗದ ಜನರಿಗೆ ಎಲ್ಲಿಲ್ಲದ ಖುಷಿ. ಇಲ್ಲಿನ ಹಚ್ಚ- ಹಸಿರು, ಧುಮ್ಮಿಕ್ಕಿ ಹರಿಯುವ ಜಲಪಾತಗಳು, ಹಳ್ಳ ತೊರೆಗಳು, ಪ್ರಕೃತಿಯ ಸೊಬಗು..ಇವಕ್ಕೆಲ್ಲ ಮನ ಸೋಲದವರಿಲ್ಲ. ಆದರೆ, ಇಲ್ಲಿರುವ ಜನರು ಮೂಲಭೂತ ಸೌಕರ್ಯಗಳಿಲ್ಲದೇ ನರಕಯಾತನೆ ಅನುಭವಿಸುತ್ತಿದ್ದಾರೆ. ಮಲೆನಾಡು ಭಾಗದ ಅದೆಷ್ಟೋ ಗ್ರಾಮಗಳಿಗೆ ಇಂದಿಗೂ ಕೂಡ ಸರಿಯಾದ ರಸ್ತೆ ವ್ಯವಸ್ಥೆ ಹಾಗೂ ಸೇತುವೆಗಳಿಲ್ಲ. ಇದಕ್ಕೆ ಜಿಲ್ಲೆಯ ಕಳಸ ತಾಲೂಕಿನಲ್ಲಿ ಬರುವ ಹತ್ತಾರು ಹಳ್ಳಿಗಳು ಸಾಕ್ಷಿ.
ಹೌದು ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹತ್ತಾರು ಹಳ್ಳಿಗಳು ಇಂದಿಗೂ ಕನಿಷ್ಟ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ತಾಲೂಕಿನ ಎಸ್ಕೆ ಮೇಗಲ್, ಕೊಣೆಗೋಡು, ವಾಟೆಹಳ್ಳ ಗ್ರಾಮಸ್ಥರು ಮಳೆಗಾಲದಲ್ಲಿ ಹಳ್ಳ ದಾಟಲು ಪರದಾಟ ನಡೆಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ರಸ್ತೆ, ಕಿರು ಸೇತುವೆ ಜೊತೆಗೆ ನೆಟ್‌ವರ್ಕ್ ಸಮಸ್ಯೆ ಇದೆ. ಶೀಘ್ರವೇ ಸಮಸ್ಯೆ ಸರಿಪಡಿಸಿದರೆ ಸಾಕು. ನಮಗೆ ಬೇರೇನೂ ಬೇಡ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
"ಎಸ್ಕೆ ಮೇಗಲ್ ಗ್ರಾಮದ ಕೊಣೆಗೋಡು ಪ್ರದೇಶದಲ್ಲಿ ರಸ್ತೆ ಹಾಗೂ ಸೇತುವೆ ಸೌಕರ್ಯಕ್ಕಾಗಿ ಜನರು ಬೇಡಿಕೆಯಿಟ್ಟಿದ್ದಾರೆ. ಕೊಣೆಗೋಡು ಹೊಸಗದ್ದೆ ರಸ್ತೆ ಹಾಗೂ ಕಿರು ಸೇತುವೆಗೆ ಈಗಾಗಲೇ 40 ಲಕ್ಷ ಹಾಗೂ ವಾಟೆ ಹಳ್ಳ ಸೇತುವೆ ಅಭಿವೃದ್ಧಿಗೆ 40 ಲಕ್ಷ ಮಂಜೂರು ಆಗಿದೆ. ಆದರೆ, ಈವರೆಗೆ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಒಂದೆಡೆ ಗ್ರಾಮದ ಸಂಪರ್ಕ ರಸ್ತೆ ಹದಗೆಟ್ಟಿದೆ. ಇನ್ನೊಂದಡೆ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲ. ಇದರಿಂದ ಗ್ರಾಮ ಜನರು ಜಗತ್ತಿನ ಸಂಪರ್ಕದಿಂದ ದೂರವುಳಿದಿದ್ದಾರೆ. 50 ಕ್ಕೂ ಹೆಚ್ಚು ಮನೆಗಳಿರುವ ಈ ಪ್ರದೇಶದ ಜನರು ಮಳೆಗಾಲದಲ್ಲಿ ಹಳ್ಳ ದಾಟಿ ಕಳಸ ಪಟ್ಟಣಕ್ಕೆ ಬರುವುದು ಕಷ್ಟಕರವಾಗಿದೆ" ಎಂದು ಗ್ರಾಮದ ಜನರು ಅಲಳು ತೋಡಿಕೊಂಡಿದ್ದಾರೆ.
ಈ ಗ್ರಾಮದಲ್ಲಿ ಜನರು ತಾವೇ ನಿರ್ಮಿಸಿರುವ ಸಂಕದ ಮೂಲಕವೇ ಹಳ್ಳ ದಾಟಬೇಕು. ಚುನಾವಣೆ ಹೊತ್ತಲ್ಲಿ ಬಂದು ಹೋಗುವ ರಾಜಕಾರಣಿಗಳು ಇಲ್ಲಿಗೆ ಬಂದು ರಸ್ತೆ ಸೇತುವೆಗೆ ದುಡ್ಡು ಮಂಜೂರಾಗಿದೆ ಎಂದು ಬಣ್ಣದ ಮಾತನಾಡುತ್ತಾರೆ.ಆಮೇಲೆ ನಮ್ಮ ಗೋಲು ಕೇಳುವವರಿಲ್ಲ. ಮೂಗಿಗೆ ತುಪ್ಪ ಸವಾರಿ ಹೋಗಿರುವರೇ ಹೆಚ್ಚು. ಇನ್ನಾದರೂ ಸಂಬಂಧ ಪಟ್ಟವರು ಈ ಗ್ರಾಮಗಳ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಗ್ರಾಮಸ್ಥರಾದ ಸುರೇಶ್ ಆಗ್ರಹಿಸಿದರು.
ರಸ್ತೆ ಇಲ್ಲದೇ ವಿದ್ಯಾರ್ಥಿಗಳ ಪರದಾಟ: ಸರ್ಕಾರಿ ಶಾಲೆಯೊಂದಕ್ಕೆ ಹೋಗಲು ಸರಿಯಾದ ರಸ್ತೆ ಮಾರ್ಗವಿಲ್ಲದೇ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಿತ್ಯ ಪರದಾಡುತ್ತಿರುವ ಘಟನೆಯೊಂದು ಇತ್ತೀಚೆಗೆ ವರದಿಯಾಗಿತ್ತು. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ನಂದೀಪುರ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಾರಿ ವಸತಿ ಶಾಲೆಗೆ ಸರಿಯಾದ ರಸ್ತೆ ಮಾರ್ಗವಿಲ್ಲದೇ ಕೂಗಳತೆ ದೂರದ ಶಾಲೆಗೆ ಸುಮಾರು 6 ಕಿ.ಮಿ ಸುತ್ತಿ ಬಳಸಿ ಬರಬೇಕಾಗಿದೆ. ಕಾರಣ ಶಾಲೆ ಪಕ್ಕದ ಖಾಸಗಿ ಜಮೀನು ಮಾಲೀಕ ಶಾಲೆ ರಸ್ತೆಗೆ ಅಡ್ಡಲಾಗಿ ತಂತಿ ಬೇಲಿ ಹಾಕಿರುವುದು.ಹಾಗಾಗಿ 20 ಕೋಟಿ ವೆಚ್ಚದ ಸರ್ಕಾರಿ ಶಾಲೆಗೆ ರಸ್ತೆಯೇ ಇಲ್ಲ. ಅಧಿಕಾರಿಗಳ ಎಡವಟ್ಟಿನಿಂದ ವಸತಿ ಶಾಲೆ ನಿರ್ಮಾಣ ಮಾಡಿದ ಪರಿಣಾಮ ಶಿಕ್ಷಕರು ಹಾಗೂ ಮಕ್ಕಳು ರಸ್ತೆ ಇಲ್ಲದೇ ಪರದಾಡುವಂತಾಗಿದೆ.
ಇದನ್ನೂ ಓದಿ: 20 ಕೋಟಿ ವೆಚ್ಚದಲ್ಲಿ ಸರ್ಕಾರಿ ವಸತಿ ಶಾಲೆ ನಿರ್ಮಾಣ: ಹೋಗಲು ರಸ್ತೆ ಇಲ್ಲದೇ ವಿದ್ಯಾರ್ಥಿಗಳ ಪರದಾಟ