ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ಸೊಂದು ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಬಸ್ಸು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅದರ ಮೇಲೆ ಮರ ಬಿದ್ದಿದೆ. ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಸೀಕೆ ಗ್ರಾಮದಲ್ಲಿ ಈ ದುರಂತ ಘಟನೆ ನಡೆದಿದೆ. ಮಂಗಳವಾರ ಎನ್ ಆರ್ ಪುರದಿಂದ ಬಸ್ ಮೈಸೂರಿಗೆ ಹೊರಟಿತ್ತು. ಈ ವೇಳೆ ಸುಮಾರು 15 ಕಿಲೋಮೀಟರ್ ದೂರ ಕ್ರಮಿಸಿದಾಗ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಗುದ್ದಿದೆ. ಪರಿಣಾಮ ಮರ ಬಸ್ಸಿನ ಮೇಲೆ ಬಿದ್ದಿದೆ. ಕೆಲವು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ಸಿನಲ್ಲಿ ಸುಮಾರು 28 ಜನ ಪ್ರಯಾಣಿಕರಿದ್ದರು. ಇದರಲ್ಲಿ 10-12 ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಎನ್ ಆರ್ ಪುರ ಹಾಗೂ ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ಸು ಮರಕ್ಕೆ ಗುದ್ದಿದ ರಭಸಕ್ಕೆ ಬಸ್ಸಿನ ಟಾಪ್ ಕಿತ್ತು ಹೋಗಿದೆ. ಅದೃಷ್ಟವಶಾತ್ ದೊಡ್ಡ ಅವಘಡ ತಪ್ಪಿದೆ. ದೇವರ ದಯೆಯಿಂದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಸ್ಥಳೀಯರು ಹೇಳಿದ್ದಾರೆ.
ಕೂಡಲೇ ಎನ್ ಆರ್ ಪುರ ಪೊಲೀಸರು ಹಾಗೂ ಸ್ಥಳೀಯರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಎನ್ ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಬೈಕ್ಗೆ ಡಿಕ್ಕಿ ತಪ್ಪಿಸಲು ಹೋಗಿ KSRTC ಬಸ್ ಪಲ್ಟಿ: 20 ಪ್ರಯಾಣಿಕರಿಗೆ ಗಾಯ