ಚಿಕ್ಕಮಗಳೂರು : ಸರ್ಕಾರದ ಲೋಪ-ದೋಷಗಳನ್ನ ಮುಚ್ಚಿ ಹಾಕಲು ಹಿಜಾಬ್ ವಿವಾದ ಸೃಷ್ಟಿ ಮಾಡಲಾಗಿದೆ. ಭಾವನಾತ್ಮಕ ವಿಷಯಗಳಲ್ಲಿ ಆಟ ಆಡುತ್ತಿರುವುದೇ ಬಿಜೆಪಿ ಮುಖಂಡರು. ಕಾಂಗ್ರೆಸ್ ಪಕ್ಷವು ಸರಕಾರದ ಲೋಪ ದೋಷಗಳನ್ನ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಹೇಳಿದ್ದಾರೆ.
ಜೆಡಿಎಸ್ ಜಾತ್ಯಾತೀತ ಪಕ್ಷ ಅಂತಾ ಅವರಿಗೆ ಬೆಂಬಲ ಕೊಟ್ಟಿದ್ದೆವು. ಆದರೆ, ಕುಮಾರಸ್ವಾಮಿಯವರು ತಮ್ಮ ಅವಕಾಶವಾದಿತನವನ್ನ ಪ್ರದರ್ಶಿಸಿದರು. ಐದು ವರ್ಷ ಅವರೇ ಸಿಎಂ ಆಗಬಹುದಿತ್ತು, ಕೊಟ್ಟ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ.
ಶಾಸಕರ ವಿಶ್ವಾಸಗಳಿಸದೆ, ಸರಿಯಾಗಿ ಆಡಳಿತವೂ ಮಾಡದೆ ಅಧಿಕಾರ ಕಳೆದುಕೊಂಡರು. ಈಗ ಎಲ್ಲಾ ಕಳೆದುಕೊಂಡು ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಹಿಜಾಬ್ ವಿವಾದದ ಬಗೆಗೆ ಪ್ರತಿಕ್ರಿಯಿಸಿದ ಅವರು, ಶಾಲಾ-ಕಾಲೇಜುಗಳಲ್ಲಿ ಹಿಂದೆ ಹೇಗಿತ್ತೋ ಹಾಗೆ ಡ್ರೆಸ್ ಕೋಡ್ ಮುಂದುವರೆಯಲಿ. ಬಿಜೆಪಿ ತನ್ನ ಆಡಳಿತದ ವೈಫಲ್ಯ ಮರೆ ಮಾಚಲು ಭಾವನಾತ್ಮಕ ವಿಚಾರವನ್ನು ಎಳೆದು ತಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ.
ಅದನ್ನು ನೋಡಿ ಭಾವನಾತ್ಮಕ ವಿಚಾರ ಹುಟ್ಟು ಹಾಕಿದ್ದಾರೆ. ಹಿಜಾಬ್ ಕುರಿತ ಸಂಗತಿಗಳು ಹಿಂದೆ ಹೇಗಿತ್ತೋ ಹಾಗೇ ಮುಂದುವರೆಯಲಿ ಅನ್ನೋದು ನಮ್ಮ ನಿಲುವು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ತಿಳಿಸಿದ್ದಾರೆ