ಚಿಕ್ಕಮಗಳೂರು: ಮಲೆನಾಡಿನಲ್ಲಿ ವನ್ಯ ಜೀವಿಗಳು ಮತ್ತು ಮಾನವ ಸಂಘರ್ಷ ಸಾಮಾನ್ಯ. ಆಗಾಗ ಆನೆ, ಕಾಟಿ (ಕಾಡು ಕೋಣ), ಜಿಂಕೆಯಂತಹ ಪ್ರಾಣಿಗಳು ತೋಟಗಳಿಗೆ ಪ್ರವೇಶ ಮಾಡುವುದು ಕೇಳಿಬರುತ್ತವೆ. ಆದರೆ ಮೂಡಿಗೆರೆ ಭಾಗದಲ್ಲಿ ಕಾಳಿಂಗ ಸರ್ಪ ಕಂಡು ಬಂದಿದೆ. ಇದು ಸಾಮಾನ್ಯ ವಿಶೇಷವೇ ಸರಿ. ಏಕೆಂದರೆ ಮಲೆನಾಡಿನ ಆಗುಂಬೆ ಭಾಗ ಕಾಳಿಂಗ ಸರ್ಪದ ಆವಾಸ. ಅಲ್ಲಿನ ವಾತಾವರಣ ಸಾಮಾನ್ಯವಾಗಿ ಸರ್ಪಕ್ಕೆ ವಾಸ ಯೋಗ್ಯವಾಗಿದೆ. ಆದರೆ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಕಾಳಿಂಗಗಳು ಬಹಳ ಅಪರೂಪ.
ಇಂದು 14 ಅಡಿ ಉದ್ದದ ಕಾಳಿಂಗ ಸರ್ಪ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಚಕ್ಕೋಡು ಗ್ರಾಮದಲ್ಲಿ ಕಂಡು ಬಂದಿದೆ. ಜಗದೀಶ್ ಎಂಬುವವರ ಕಾಫಿ ತೋಟದಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ತೋಟದಲ್ಲಿ ಕೆಲಸ ಮಾಡುತ್ತಿರುವ ವೇಳೆ ಹಾವು ಕಾಣಿಸಿಕೊಳ್ಳುತ್ತಿದ್ದಂತೆ, ಕಾರ್ಮಿಕರು ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ತೋಟದ ಮಾಲೀಕನಿಗೆ ವಿಚಾರವನ್ನು ಕಾರ್ಮಿಕರು ತಿಳಿಸಿದ್ದು, ಕೂಡಲೇ ತೋಟದ ಮಾಲೀಕ ಬಣಕಲ್ನ ಉರಗ ತಜ್ಞ ಆರಿಫ್ಗೆ ಕರೆ ಮಾಡಿದ್ದರು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಉರಗತಜ್ಞ ಸತತ 30 ನಿಮಿಷ ಕಾರ್ಯಾಚರಣೆ ಬಳಿಕ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ. ಕಾಳಿಂಗಸರ್ಪ ಹಿಡಿದ ನಂತರ ತೋಟದ ಮಾಲೀಕ ಹಾಗೂ ತೋಟದ ಕಾರ್ಮಿಕರು ನಿಟ್ಟಿಸಿರು ಬಿಟ್ಟಿದ್ದಾರೆ. ನಂತರ ಸೆರೆ ಹಿಡಿದ ಕಳಿಂಗ ಸರ್ಪವನ್ನು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಸುರಕ್ಷಿತವಾಗಿ ಚಾರ್ಮಡಿ ಘಾಟಿಗೆ ಆರಿಫ್ ಬಿಟ್ಟಿದ್ದಾರೆ.
ಇದನ್ನೂ ಓದಿ: ಹಂಪಿಯಲ್ಲಿ ಅಪರೂಪದ ಬಿಳಿ ಮಣ್ಣು ಮುಕ್ಕ ಹಾವು ಪತ್ತೆ: ವಿಡಿಯೋ
ಬಿಳಿ ಹೆಬ್ಬಾವು: ಇತ್ತೀಚೆಗೆ ಉತ್ತರಕನ್ನಡ ಜಿಲ್ಲೆಯ ಕುಮಟಾದ ಹೆಗಡೆ ಗ್ರಾಮದ ಗಾಂಧಿ ನಗರದ ದೇವಿ ನಾರಾಯಣ ಮುಕ್ರಿ ಎಂಬವರ ಮನೆಯ ಅಂಗಳದಲ್ಲಿ ಈ ಬಿಳಿ ಹೆಬ್ಬಾವು ಕಾಣಿಸಿಕೊಂಡಿದೆ. ಈ ರೀತಿಯ ಬಿಳಿ ಬಣ್ಣದ ಹಾವನ್ನು ಮೊದಲ ಬಾರಿಗೆ ಕಂಡ ಮನೆಯವರು ಉರಗ ತಜ್ಞ ಪವನ್ ನಾಯ್ಕರನ್ನು ಸಂಪರ್ಕಿಸಿದ್ದರು. ರಾತ್ರಿ 12 ಗಂಟೆಯ ವೇಳೆ ಸ್ಥಳಕ್ಕಾಗಮಿಸಿದ ಅವರು, ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದ್ದರು.
ಕಳೆದ ವರ್ಷವೂ ಮಿರ್ಜಾನ್ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿದ್ದು, ರಾತ್ರಿ ವೇಳೆ ಪವನ್ ನಾಯ್ಕ ರಕ್ಷಣೆ ಮಾಡಿದ್ದರು. ಈ ಹೆಬ್ಬಾವಿನ ಮೈಬಣ್ಣ ಬಿಳಿಯಾಗಿರುವುದು ಸಾಕಷ್ಟು ಸುದ್ದಿಯಾಗಿ ವಿಡಿಯೋ, ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದವು. ಇದೀಗ ಕಳೆದ ವರ್ಷ ಸಿಕ್ಕ ಹೆಬ್ಬಾವಿಗಿಂತಲೂ 3 ಪಟ್ಟು ದೊಡ್ಡದಾದ ಹೆಬ್ಬಾವು ಹೆಗಡೆಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: 9 ಅಡಿ ಉದ್ದದ ಅತಿ ದೊಡ್ಡ ಬಿಳಿ ಹೆಬ್ಬಾವು ಕುಮಟಾದಲ್ಲಿ ಪತ್ತೆ!- ವಿಡಿಯೋ ನೋಡಿ