ಚಿಕ್ಕಮಗಳೂರು: ಕೊರೊನಾ ವೈರಸ್ ಬಂದ ಮೇಲೆ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ಶಿಕ್ಷಣ ಇಲಾಖೆ ಶಾಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕವೇ ಶಿಕ್ಷಣ ನೀಡುತ್ತಿದೆ. ಆದರೆ ಈ ಆನ್ಲೈನ್ ಶಿಕ್ಷಣದಿಂದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಮಲೆನಾಡಿನ ಗ್ರಾಮೀಣ ಭಾಗಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರ ಮಕ್ಕಳೇ ವ್ಯಾಸಂಗ ಮಾಡುತ್ತಿದ್ದು, ಇವರಿಗೆ ಸ್ಮಾರ್ಟ್ ಫೋನ್ ಹಾಗೂ ಟಿವಿಗಳನ್ನು ತೆಗೆದುಕೊಳ್ಳಲು ಶಕ್ತಿಯಿಲ್ಲ. ಒಂದು ವೇಳೆ ತೆಗೆದುಕೊಂಡರೂ ವಿದ್ಯುತ್ ಸಮಸ್ಯೆ ಹಾಗೂ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಕಟ್ಟಿಟ್ಟಬುತ್ತಿ. ಇದರಿಂದ ಸರಿಯಾದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಆಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೊಳಲೆ ಗ್ರಾಮದ ಮಕ್ಕಳೂ ಸಹ ನೆಟ್‍ವರ್ಕ್ ಸಮಸ್ಯೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಕಾಡಿನಲ್ಲಿ ಕುಳಿತು ಅಧ್ಯಯನ ಮಾಡುತ್ತಿದ್ದಾರೆ.
ಓದಿ: ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗೂ ಕಾರಣಗಳ ಬಗ್ಗೆ ವರದಿ ಕೊಡಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಆಧುನಿಕತೆಯ ಭರಾಟೆಯಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಬಹಳಷ್ಟು ಮುಂದುವರೆದಿದೆ. ಇಸ್ರೋದಂತಹ ಸಂಸ್ಥೆಗಳು ವಿಜ್ಞಾನ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿವೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೀಣ ಪ್ರದೇಶಕ್ಕೆ ಮೂಲಭೂತ ಸೌಕರ್ಯ ಹಾಗೂ ನೆಟ್‍ವರ್ಕ್ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.