ಬೆಂಗಳೂರು/ಚಿಕ್ಕಮಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ಚುನಾವಣಾ ಆಯೋಗವು ಅಕ್ರಮ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ನಿನ್ನೆ 83.41 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ 2.76 ಕೋಟಿ ರೂ.ಮೌಲ್ಯದ 5.548 ಕೆಜಿ ಚಿನ್ನಾಭರಣ, ಪುಲಕೇಶಿನಗರ ಕ್ಷೇತ್ರದಲ್ಲಿ 40 ಲಕ್ಷ ರೂ. ಮೌಲ್ಯದ 80 ಕೆಜಿ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ನೀತಿ ಸಂಹಿತೆ ಜಾರಿ ಬಳಿಕ ಈವರೆಗೆ ಒಟ್ಟು 116.79 ಕೋಟಿ ರೂ. ನಗದು, 23.57 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳನ್ನು ಜಪ್ತಿ ಮಾಡಲಾಗಿದೆ. 78.71 ಕೋಟಿ ರೂ. ಮೌಲ್ಯದ 21.20 ಲಕ್ಷ ಲೀಟರ್ ಮದ್ಯ, 21.85 ಕೋಟಿ ರೂ. ಮೌಲ್ಯದ 1,784 ಕೆಜಿ ಮಾದಕ ವಸ್ತುಗಳು, 85.53 ಕೋಟಿ ರೂ. ಮೌಲ್ಯದ 167.81 ಕೆಜಿ ಚಿನ್ನ, 4.54 ಕೋಟಿ ರೂ. ಮೌಲ್ಯದ 656.13 ಕೆಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಒಟ್ಟು 90.08 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇಲ್ಲಿಯವರೆಗೆ ನಗದು, ಮದ್ಯ ಸೇರಿದಂತೆ ಒಟ್ಟು 331.01 ಕೋಟಿ ರೂ. ಮೌಲ್ಯದ ವಸ್ತುಗಳ ಜಪ್ತಿಯಾಗಿದೆ.
ಹಾಗೆಯೇ, 2,602 ಎಫ್‌ಐಆರ್, 69,854 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಗಿ ರದ್ದುಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 5,633 ಪ್ರಕರಣಗಳನ್ನು ದಾಖಲಿಸಲಾಗಿದೆ. 10,697 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 16,395 ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿದೆ ಎಂದು ಆಯೋಗ ತಿಳಿಸಿದೆ.
ಇದನ್ನೂ ಓದಿ : ಜೆಡಿಎಸ್ ಭದ್ರಕೋಟೆಯಲ್ಲಿ ಯಡಿಯೂರಪ್ಪ ಅಬ್ಬರ.. ಬಿಜೆಪಿ ಅಭ್ಯರ್ಥಿ ಪರ ತವರಿನಲ್ಲಿ ಮತಬೇಟೆ
ಚಿಕ್ಕಮಗಳೂರು ಎಸ್ಪಿ ಪ್ರತಿಕ್ರಿಯೆ: ಚಿಕ್ಕಮಗಳೂರು ನಗರದಲ್ಲಿ ಗುರುವಾರ ಮಾತನಾಡಿದ ಎಸ್ಪಿ ಉಮಾ ಪ್ರಶಾಂತ್, ಜಿಲ್ಲೆಯಲ್ಲಿ ಚಿನ್ನಾಭರಣ ಸೇರಿದಂತೆ 36 ಕೋಟಿ ಮೌಲ್ಯದ ಅಕ್ರಮ ವಸ್ತುಗಳು, ಮದ್ಯ, ಹಣ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ 896 ರೌಡಿಶೀಟರ್ಗಳನ್ನು ಗುರುತಿಸಿದ್ದು, 10 ಜನರನ್ನು ಗಡಿಪಾರು ಮಾಡಲಾಗಿದೆ. ಅಕ್ರಮ ಮದ್ಯ ದಾಸ್ತಾನು ಸಂಬಂಧ 8 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಅಂಥೋನಿ ರಾಜು, ಮನು, ಶ್ರೀನಿವಾಸ್, ಯತೀಶ್, ಮಂಜುನಾಥ್ ಎಂಬುವರನ್ನು ಬಂಧಿಸಲಾಗಿದೆ. ಉಳಿದಂತೆ ಕೆಲವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಮೂರು ತಂಡಗಳನ್ನು ಡಿವೈಎಸ್‍ಪಿ ನೇತೃತ್ವದಲ್ಲಿ ರಚಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಕ್ಷೀಣಿಸಿದ್ದರೂ ಸಹ ಈ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಸೂಕ್ತ ಬಂದೋಬಸ್ತ್ ನಿಯೋಜಿಸಲಾಗಿದೆ. ಮತದಾನ ದಿನ ಮತಗಟ್ಟೆ ಸುತ್ತಮುತ್ತ ಸೆಕ್ಷನ್ 144 ಹಾಗೂ ಡ್ರೈ ಡೇ ವಿಧಿಸಲಾಗಿದೆ. 22 ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ ಎಂದರು.
ಇದನ್ನೂ ಓದಿ : ರಾಜ್ಯದಲ್ಲಿ ಈವರೆಗೆ 87,501 ಜನರಿಂದ ಮನೆಯಿಂದಲೇ ಮತದಾನ: ಮುಖ್ಯಚುನಾವಣಾಧಿಕಾರಿ