ಚಿಕ್ಕಮಗಳೂರು: ಜನವರಿ 15 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ ಎಂದು ಜೆಡಿಎಸ್ನ ಮಾಜಿ ಶಾಸಕ ವೈ ಎಸ್ ವಿ ದತ್ತ ಕಡೂರು ತಾಲ್ಲೂಕಿನ ಯಗಟಿಯಲ್ಲಿ ಹೇಳಿಕೆ ನೀಡಿದ್ದಾರೆ.
ನಿರಂತರವಾಗಿ ಕಡೂರಿನ ಜನರ ಜೊತೆ ಸಂಪರ್ಕದಲ್ಲಿದ್ದೇನೆ. ಕಳೆದ ಒಂದೂವರೆ ವರ್ಷದಲ್ಲಿ ತಾಲ್ಲೂಕಿನಲ್ಲಿ ಹೋದೆಡೆಯಲ್ಲೆಲ್ಲಾ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಬೇಕೆಂಬ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗುತ್ತಿತ್ತು. ಜೊತೆಗೆ ಇಲ್ಲಿ ತುರ್ತಾದ ಮತ್ತು ಐತಿಹಾಸಿಕವಾದ ಹಾಗೂ ಅನಿವಾರ್ಯವಾದ ಬದಲಾವಣೆಯನ್ನು ಜನತೆ ಬಯಸಿದ್ದಾರೆ. ಜನಾಭಿಪ್ರಾಯ, ನನ್ನ ಜೊತೆಯಿರುವ ನನ್ನ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಒಟ್ಟಾರೆ ಅಭಿಪ್ರಾಯದಂತೆ ನನ್ನ ಸಮಾನ ಮನಸ್ಕ ಸ್ನೇಹಿತರಿರುವ ಕಾಂಗ್ರೆಸ್ ಪಕ್ಷಕ್ಕೆ ಬೇಷರತ್ತಾಗಿ ಸೇರುವ ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ.
ಈಗೆರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದಿಂದ ಕರೆ ಬಂದಿದ್ದು, ಜನವರಿ 15 ರಂದು ಪಕ್ಷಕ್ಕೆ ಸೇರ್ಪಡೆಯಾಗಲು ಸೂಚಿಸಿದ್ದಾರೆ. ಅಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ. ಕೆ. ಶಿವಕುಮಾರ್ ಜಾಗೂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದೇನೆ. ನಂತರ ನನ್ನ ಅಭಿಮಾನಿಗಳು, ಕಾರ್ಯಕರ್ತರು ಕಡೂರಿನಲ್ಲಿ ನಡೆವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಐವತ್ತು ವರ್ಷಗಳಿಂದ ಒಂದೇ ಪಕ್ಷದಲ್ಲಿದ್ದು ಇದೀಗ ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ ಎಂದರು.
ಸಂಸದ ಪ್ರಜ್ವಲ್ ರೇವಣ್ಣ ಅವರು ಅತ್ಯಂತ ಗೌರವಯುತವಾಗಿ, ಪ್ರೀತಿಯಿಂದ ಪಕ್ಷಕ್ಕೆ ಮರಳಿ ಬರುವಂತೆ ಕರೆದಿದ್ದಾರೆ. ಅವರ ಪ್ರೀತಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಆದರೆ ನಾನು ಮತ್ತೆ ಬರುವ ಪರಿಸ್ಥಿತಿಯಲ್ಲಿ ಇಲ್ಲ ಎಂಬುದನ್ನು ವಿನಮ್ರತೆಯಿಂದ ತಿಳಿಸುತ್ತೇನೆ ಎಂದು ಹೇಳಿದರು.
ದೇವೇಗೌಡರಿಗೂ ನನಗೂ ಐವತ್ತು ವರ್ಷಗಳಿಂದ ತಂದೆ ಮಕ್ಕಳ ಸಂಬಂಧ. ನಾನೆಲ್ಲೆ ಇರಲಿ ಅವರ ಹಾರೈಕೆ ನನ್ನ ಮೇಲಿರುತ್ತದೆ. ನನ್ನನ್ನು ವಿಧಾನ ಪರಿಷತ್ ಸದಸ್ಯನನ್ನಾಗಿಸಿದ್ದು ಅವರೇ. ಅದು ನನ್ನ ರಾಜಕೀಯ ಜೀವನಕ್ಕೆ ತಿರುವು ನೀಡಿತು. ಇದೀಗ ಅನಿವಾರ್ಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವುದನ್ನು ಅವರಿಗೆ ತಿಳಿಸಲು ಒಂದು ರೀತಿ ಮುಜುಗರವಾಗುತ್ತದೆ. ಆದರೆ ನನ್ನ ಪರಿಸ್ಥಿತಿಯನ್ನು ದೇವೇಗೌಡರು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ನನ್ನದು ಎಂದು ಭಾವುಕರಾಗಿ ನುಡಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಭೇಟಿಯಾದ ವೈಎಸ್ವಿ ದತ್ತ : ಕುತೂಹಲ ಮೂಡಿಸಿದ ಮಾತುಕತೆ