ಚಿಕ್ಕಮಗಳೂರು: ಜೆಡಿಎಸ್ ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಆಗಿರುವ ಹಿನ್ನೆಲೆಯಲ್ಲಿ ವರಿಷ್ಠರು ಅಲರ್ಟ್ ಆಗಿದ್ದು, ಇಂದು ಚಿಕ್ಕಮಗಳೂರಿನ ರೆಸಾರ್ಟ್ವೊಂದರಲ್ಲಿ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ರೆಸಾರ್ಟ್ನಲ್ಲಿದ್ದು, ಪಕ್ಷದ ಶಾಸಕರು ಕೂಡ ಇಲ್ಲಿಗೆ ಆಗಮಿಸಿದ್ದಾರೆ. ಆಪರೇಷನ್ ಹಸ್ತಕ್ಕೆ ರಣತಂತ್ರ ರೂಪಿಸಲು ದಳಪತಿಗಳು ಸಭೆ ಕರೆದಿದ್ದಾರೆ ಎನ್ನಲಾಗುತ್ತಿದೆ. ಸಭೆಯಲ್ಲಿ 19 ಹಾಲಿ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಭಾಗಿಯಾಗಲಿದ್ದಾರೆ. ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಧ್ಯಮಗೋಷ್ಠಿ ನಡೆಸುವ ಸಾಧ್ಯತೆ ಇದೆ.
ಈಗಾಗಲೇ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಚಿಂತಾಮಣಿ ಮಾಜಿ ಶಾಸಕ ಕೃಷ್ಣಾರೆಡ್ಡಿ, ಮಾಗಡಿ ಮಾಜಿ ಶಾಸಕ ಮಂಜು, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಸೇರಿದಂತೆ 15ಕ್ಕೂ ಹೆಚ್ಚು ಶಾಸಕರು ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಜೆಡಿಎಸ್ ಸಭೆಯ ಬಳಿಕ ಎಸ್.ಎಲ್.ಭೋಜೇಗೌಡರ ಮಗಳ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ಸಭೆಯಲ್ಲಿ ಪಾಲ್ಗೊಂಡು ಒಗ್ಗಟ್ಟಿನ ಪ್ರದರ್ಶನಕ್ಕೆ 'ದಳ'ಪತಿಗಳು ಮುಂದಾಗಿರುವುದು ಮಹತ್ವದ ಬೆಳವಣಿಗೆಗೆ ಕಾರಣವಾಗಿದೆ.
ಕಾಂಗ್ರೆಸ್ ಆಪರೇಷನ್ ಹಸ್ತದಿಂದ ಎಚ್ಚೆತ್ತಿರುವ 'ದಳ'ಪತಿಗಳು ತಮ್ಮ ಶಾಸಕರನ್ನು ಹಿಡಿದಿಟ್ಟು ಸಭೆಗೆ ಮುಂದಾಗಿರುವುದು ಮಹತ್ವ ಪಡೆದುಕೊಂಡಿದೆ.
ಸಿ.ಎಸ್.ಪುಟ್ಟರಾಜು ಹೇಳಿಕೆ: ಸಚಿವ ಪ್ರಿಯಾಂಕ್ ಖರ್ಗೆ ಕಲಿಯುವುದು ಬಹಳ ಇದೆ. ಹಗುರ ಮಾತುಗಳು ಬೇಡ ಎಂದು ರೆಸಾರ್ಟ್ ಸಮೀಪ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ಜೆಡಿಎಸ್ ಪಕ್ಷದಿಂದ ಯಾರೂ ಹೋಗಲ್ಲ. ನಾವೆಲ್ಲಾ ಒಗ್ಗಟ್ಟಿನಿಂದ ಇದ್ದೇವೆ. ಹೆಚ್ಡಿಕೆ, ದೇವೇಗೌಡರ ಬಗ್ಗೆ ಗೌರವವಿದೆ, ಯಾರೂ ಹೋಗಲ್ಲ. ನಾವ್ಯಾರೂ ಎಲ್ಲಿಗೂ ಹೋಗಲ್ಲ ಅಂತ ಎಲ್ಲರೂ ಮಾತು ಕೊಟ್ಟಿದ್ದಾರೆ. ಇಲ್ಲಿಗೆ ಎಲ್ಲಾ ಶಾಸಕರು ಬರುತ್ತಾರೆ, ಎಲ್ಲದರ ಬಗ್ಗೆಯೂ ಮಾತುಕತೆ ನಡೆಯುತ್ತದೆ ಎಂದು ಪುಟ್ಟರಾಜು ತಿಳಿಸಿದ್ದಾರೆ.
ದೇವೇಗೌಡರ ಕುಟುಂಬ ಸೋಲು-ಗೆಲುವನ್ನು ಸಮಾನಾಗಿ ಸ್ವೀಕರಿಸುತ್ತದೆ. ಯಾರೇ ಆದರೂ ಸಣ್ಣತನದ ಹೇಳಿಕೆ ಕೊಡುವುದು ಒಳ್ಳೆಯದಲ್ಲ. ಇಲ್ಲಿಗೆ ಎಲ್ಲರೂ ಬರುತ್ತಾರೆ, ಎಲ್ಲರೂ ಒಂದೆಡೆ ಸೇರುತ್ತೇವೆ. ಎಲ್ಲಾ ವಿಚಾರ ವಿನಿಮಯ ಆಗುತ್ತೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಗಾಳ ಹಾಕುವ ಕೆಲಸ ನಡೆಯುತ್ತಿದೆ. ಆದರೆ, ಯಾರೂ ಕಿವಿಗೊಡಲ್ಲ. ನಮಗೆ ಯಾವುದೇ ಆಫರ್ ಬಂದಿಲ್ಲ, ಬಂದರೂ ನಾವು ಹೋಗಲ್ಲ. ನಾವು ದೇವೇಗೌಡರ ಕುಟುಂಬ ಸದಸ್ಯರಿದ್ದಂತೆ ಎಂದರು.
ಇದೇ ವೇಳೆ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್ ಮಾತನಾಡಿ, ಶರಣಗೌಡರೊಂದಿಗೆ ನಾನು ಮಾತನಾಡ್ತೀನಿ. ಅವರು ನಮ್ಮ ಶಾಸಕರು, ನಿಷ್ಠಾವಂತ ಕಾರ್ಯಕರ್ತ. ನಮ್ಮಲ್ಲಿ ಯಾವ ಅಸಮಾಧಾನವೂ ಇಲ್ಲ. ಆಡಳಿತ ಪಕ್ಷದ ಶಾಸಕರಿಗೆ ಅನುದಾನ ನೀಡುತ್ತಿಲ್ಲ. ಅಲ್ಲಿನ ಶಾಸಕರು ಬೇರೆ ಬೇರೆ ಕಡೆ ಹೋಗಿ ದೂರು ನೀಡ್ತಿದ್ದಾರೆ. ಅವರಿಗೆ ಬಹುಮತ ಕೊಟ್ಟಿದ್ದೇ ತಪ್ಪಾಯ್ತು ಎಂದು ಟೀಕಿಸಿದರು.
ಇದನ್ನೂ ಓದಿ: ಚಿಕ್ಕಮಗಳೂರಿನ ರೆಸಾರ್ಟ್ನಲ್ಲಿ ರಿಲ್ಯಾಕ್ಸ್ ಮೂಡ್ನಲ್ಲಿರುವ ಮಾಜಿ ಸಿಎಂ ಎಚ್ಡಿಕೆ