ಚಿಕ್ಕಮಗಳೂರು: ಅಮೃತ ಕುಡಿಯುವ ನೀರು ಯೋಜನೆಯ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಜನವರಿ 26ರ ಒಳಗೆ ಪೂರ್ಣಗೊಳಿಸಿ, ನೀರು ಪೂರೈಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅಧಿಕಾರಿಗಳಿಗೆ ಸೂಚಿಸಿದರು.
ನಗರ ಸಭೆ ಕಚೇರಿಯ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿ ಮಾತನಾಡಿದ ಅವರು, ನಗರದ 23 ವಾರ್ಡ್ಗಳ ಪೈಕಿ 10 ವಾರ್ಡ್ಗಳಲ್ಲಿ ಕುಡಿಯುವ ನೀರಿನ ಕಾಮಗಾರಿ ಬಾಕಿ ಉಳಿದಿವೆ. ನಗರದಲ್ಲಿ ಮೂರು ಹಂತದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಮಾರ್ಚ್ ಅಂತ್ಯದಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಅಧಿಕಾರಿಗಳು ಕಾಮಗಾರಿಯ ಪೂರ್ವ ಸಿದ್ಧತಾ ಪಟ್ಟಿ ತಯಾರಿಸಿ ತ್ವರಿತವಾಗಿ ಪೂರ್ಣ ಗೊಳಿಸಬೇಕು ಎಂದು ಹೇಳಿದರು.
ನಗರದಲ್ಲಿ ಅಕ್ರಮವಾಗಿ, ಪರವಾನಿಗೆ ಇಲ್ಲದೆ ನಿರ್ಮಿಸಿದ ವಾಣಿಜ್ಯ ಕಟ್ಟಡಗಳ ವಿರುದ್ಧ ನೋಟಿಸ್ ನೀಡಿ. ಈ ಕುರಿತು ನಗರಸಭೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಸರ್ಕಾರಿ ಕಚೇರಿಯ ವಸತಿ ಗೃಹಗಳ ಕಂದಾಯ ಬಾಕಿ ಸಂಬಂಧಿಸಿದಂತೆ, ಆಸ್ಪತ್ರೆಗಳನ್ನು ಹೊರತು ಪಡಿಸಿ ಕಂದಾಯ ಬಾಕಿ ಉಳಿಸಿಕೊಂಡಿರುವ ಇಲಾಖೆಗಳಿಗೆ ನಗರಸಭೆ ವತಿಯಿಂದ ನೀಡಲಾಗುವ ಸೇವೆಯನ್ನು ಕಡಿತಗೊಳಿಸಿ. ಅಂತಿಮವಾಗಿ ನೋಟಿಸ್ ಜಾರಿಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.