ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನಲ್ಲಿ ವೈದ್ಯನಿಗೆ ಕೊರೊನಾ ನೆಗೆಟಿವ್ ಬಂದಿರೋದು ಸಂತೋಷ ತಂದಿದೆ. ಇದು ನನಗೆ ಮಾತ್ರ ಸಂತೋಷ ತಂದಿರುವ ವಿಚಾರ ಅಲ್ಲ, ಸುತ್ತ ಮುತ್ತಲ ಪ್ರದೇಶದ ಜನರಿಗೂ ನೆಗೆಟಿವ್ ಫಲಿತಾಂಶದಿಂದ ಖುಷಿ ತಂದಿದೆ ಎಂದು ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ವೈದ್ಯನ ವರದಿ ನೆಗೆಟಿವ್ ಬಂದಿರುವ ಹಿನ್ನೆಲೆ, ಮೂಡಿಗೆರೆ ತಾಲೂಕಿನ ಜನರು ನಿಟ್ಟುಸಿರು ಬಿಡುವಂತಾಗಿದೆ. ಈ ವೈದ್ಯ ಮೂಡಿಗೆರೆ ತಾಲೂಕಿನಲ್ಲಿ ಉತ್ತಮ ಸೇವೆಯನ್ನು ನೀಡುತ್ತಿದ್ದರು. ಬಡವರು, ಶ್ರೀಮಂತರು ಎನ್ನದೆ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದರು. ವೈದ್ಯ ಸುಮಾರು 15 ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದು, ಸೈನ್ಯದಿಂದ ವಾಪಸ್ ಬಂದ ನಂತರ ಬೆಂಗಳೂರಿನಲ್ಲಿ ಇವರಿಗೆ ಸಾಕಷ್ಟು ಅವಕಾಶಗಳಿದ್ದವು.
ಆದರೆ, ಅವೆಲ್ಲವನ್ನು ತಿರಸ್ಕರಿಸಿ ಗ್ರಾಮಾಂತರ ಪ್ರದೇಶವನ್ನು ಆಯ್ಕೆ ಮಾಡಿಕೊಂಡು, ಬಡವರ ಸೇವೆಯನ್ನು ಮಾಡುತ್ತಿದ್ದಾರೆ. ಇವರಿಗೆ ದೇವರ ಆಶೀರ್ವಾದವಿದೆ. ಜಿಲ್ಲೆಯಲ್ಲಿರುವ ಕೊರೊನಾ ಪೀಡಿತರು ಆದಷ್ಟು ಬೇಗ ವೈರಸ್ನಿಂದ ಮುಕ್ತರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಈಗಾಗಲೇ ವೈದ್ಯರಿಗೆ 6 ಬಾರಿ ಗಂಟಲು ದ್ರವ ಹಾಗೂ ರಕ್ತ ಪರೀಕ್ಷೆ ನಡೆಸಲಾಗಿದ್ದು, 5 ಬಾರಿ ನೆಗೆಟಿವ್ ಅಂಶ ಕಂಡುಬಂದಿದೆ. 6ನೇ ಫಲಿತಾಂಶ ಬರಲಿದ್ದು, ಅದು ಸುಪ್ರೀಂಕೋರ್ಟಿನ ತೀರ್ಪು ಇದ್ದಂತೆ. ಅದು ಕೂಡ ನೆಗೆಟಿವ್ ಬರಲಿದೆ ಎಂಬ ವಿಶ್ವಾಸವಿದೆ ಎಂದು ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಹೇಳಿದರು.