ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಹೀಗಾಗಿ, ಜನಜೀವನ ಅಸ್ತವ್ಯಸ್ತವಾಗಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ ಉಂಟಾಗಿದ್ದು, ಬೃಹತ್ ಗಾತ್ರದ ಬಂಡೆಗಳು ಹಾಗೂ ಮಣ್ಣು ರಸ್ತೆಗೆ ಬಂದು ಬಿದ್ದಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಮಣ್ಣು ಹಾಗೂ ಬಂಡೆಯನ್ನು ಮಳೆಯ ನಡುವೆಯೇ ತೆರವು ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದೇ ವೇಳೆ, ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸುಮಾರು ಎರಡು ಕಿಲೋಮೀಟರ್ನಷ್ಟು ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು.
![Hill collapse in Charmedi Ghatti](https://etvbharatimages.akamaized.net/etvbharat/prod-images/kn-ckm-07-charmadi-av-7202347_07082020141723_0708f_1596790043_327.jpg)
ಘಾಟಿಯಲ್ಲಿ ಗುಡ್ಡದ ಮಣ್ಣು ಕುಸಿತಗೊಂಡ ಪರಿಣಾಮ ರಸ್ತೆ ಬಿರುಕು ಬಿಟ್ಟಿದೆ. ದಕ್ಷಿಣ ಕನ್ನಡದಿಂದ- ಚಿಕ್ಕಮಗಳೂರು ಜಿಲ್ಲೆಗೆ ಬರುವಂತಹ ಸಾರ್ವಜನಿಕರು ಸದ್ಯದ ಪರಿಸ್ಥಿತಿಯಲ್ಲಿ ಈ ರಸ್ತೆಯಲ್ಲಿ ಸಂಚರಿಸದಂತೆ ಪೊಲೀಸರು ಮನವಿ ಮಾಡಿದ್ದಾರೆ.