ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಎಡಬಿಡದೇ ಮಳೆ ಸುರಿಯುತ್ತಿದೆ. ಮೂಡಿಗೆರೆ ತಾಲೂಕಿನ ತ್ರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗುಡ್ಡ ಕುಸಿತವಾಗಿದೆ.
ಗುಡ್ಡದಲ್ಲಿ ರೆಸಾರ್ಟ್ ನಿರ್ಮಾಣ ಕಾಮಗಾರಿ ನಡೆಸಿದ ಪರಿಣಾಮ ಗುಡ್ಡ ಕುಸಿತ ಆಗಿದೆ. 4 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಭೂಕುಸಿತ ಉಂಟಾಗಿದ್ದು, ಕೋಗಿಲೆ, ಗುತ್ತಿ, ದೇವರಮನೆ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ. ಇನ್ನು ಗುಡ್ಡ ಕುಸಿತದ ಸ್ಥಳದಲ್ಲೇ ಹಳ್ಳ ಹರಿಯುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.
ರೆಸಾರ್ಟ್ ನಿರ್ಮಾಣಕ್ಕೆ ತ್ರಿಪುರ ಗ್ರಾಮ ಪಂಚಾಯಿತಿ ಅನುಮತಿ ನೀಡಿತ್ತು. ಗುಡ್ಡದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಅನುಮತಿ ನೀಡಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಳೆ ಹೆಚ್ಚಾದರೆ ಮತ್ತಷ್ಟು ಗುಡ್ಡ ಕುಸಿಯುವ ಆತಂಕ ಇಲ್ಲಿನ ಸ್ಥಳೀಯರಲ್ಲಿ ಮನೆ ಮಾಡಿದೆ.
ಇದನ್ನೂ ಓದಿ: ಮಳೆಯಿಂದ ಜಲಪಾತಗಳ ಭೋರ್ಗರೆತ: ಹೆಬ್ಬೆ, ಬಾಳೆ ಬರೆ ಫಾಲ್ಸ್ ದೃಶ್ಯ ನಯನ ಮನೋಹರ